Delhi

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸಂಸದ ಈರಣ್ಣ ಕಡಾಡಿ ಧ್ವನಿ: ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Share

ದೇಶದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದ ಈರಣ್ಣ ಕಡಾಡಿ ಅವರು ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ. ಕಬ್ಬಿನ ರಿಕವರಿ ದರ ಏರಿಕೆ ಸೇರಿದಂತೆ ರೈತರಿಗೆ ಮಾರಕವಾಗಿರುವ ನಿಯಮಗಳ ಕುರಿತು ಗಂಭೀರ ಚರ್ಚೆ ನಡೆಸಿದ ಅವರು, ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಬಿಜೆಪಿ ಕಿಸಾನ್ ಮೋರ್ಚಾ ಪದಾಧಿಕಾರಿಗಳ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಈರಣ್ಣ ಕಡಾಡಿ, ಪ್ರತಿ ವರ್ಷ ಎಫ್‌.ಆರ್‌.ಪಿ ದರ ನಿಗದಿ ಪಡಿಸುವಾಗ ಕಬ್ಬಿನ ರಿಕವರಿ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತಿರುವುದು ರೈತರಿಗೆ ದೊಡ್ಡ ಹೊರೆಯಾಗಿದೆ ಎಂದು ವಿವರಿಸಿದರು. ಸದ್ಯ ರಿಕವರಿ ಪ್ರಮಾಣವನ್ನು 9.25% ರಿಂದ 10.25% ಕ್ಕೆ ಹೆಚ್ಚಿಸಿರುವುದು ಕಬ್ಬು ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿದ್ದು, ಸರ್ಕಾರ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕಬ್ಬು ಕೇವಲ ಸಕ್ಕರೆಗೆ ಸೀಮಿತವಾಗಿಲ್ಲ; ಇದರಿಂದ ಉತ್ಪತ್ತಿಯಾಗುವ ಎಥೆನಾಲ್ ಮತ್ತು ಮೊಲ್ಯಾಸಿಸ್ ದೇಶದ ಇಂಧನ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಿವೆ. ಆದ್ದರಿಂದ ಈ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.

ಇದೇ ವೇಳೆ, 2026-27ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ವೈವಿಧ್ಯತೆ ಮತ್ತು ತಾಂತ್ರಿಕತೆಗೆ ನೀಡಿರುವ ಪ್ರಾಮುಖ್ಯತೆಯನ್ನು ಸಂಸದರು ಸ್ವಾಗತಿಸಿದರು. ಪಶುಸಂಗೋಪನೆ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆಗೆ ನೀಡಿರುವ ಅನುದಾನ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡಲಿದೆ ಎಂದು ಶ್ಲಾಘಿಸಿದರು. ಸಂಸದರ ಮನವಿಯನ್ನು ಆಲಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಶೀಘ್ರವೇ ಮತ್ತೊಂದು ಉನ್ನತ ಮಟ್ಟದ ಸಭೆ ಕರೆದು ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ. ಈ ನಿಯೋಗದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜಕುಮಾರ್ ಚಹರ್ ಕಿಸಾನ್ ಮೋರ್ಚಾದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಡಾ. ಅನಿಲ್ ಬೊಂಡೆ, ರಾಷ್ಟ್ರೀಯ ಉಪಾಧ್ಯಕ್ಷ ಬನ್ಸಿಲಾಲ್ ಗುರ್ಜರ್, ಪ್ರದೀಪ್ ಪುರೋಹಿತ್, ಸುಕಾಂತ ಪಾಣಿಗ್ರಾಹಿ, ಡಾ. ಶಂಭುಕುಮಾರ ಉಪಸ್ಥಿತರಿದ್ದರು.

Tags:

error: Content is protected !!