ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಮಾಜದ ಆಸ್ತಿಯಂತಿರುವ ಹಿರಿಯ ನಾಗರಿಕರೊಂದಿಗೆ ಬೆರೆತು, ಅವರಿಗೆ ಗೌರವ ಸಲ್ಲಿಸುವ ಮೂಲಕ ಹಿರಿಯರ ಹಾರೈಕೆಯೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹುಟ್ಟುಹಬ್ಬದ ಅಂಗವಾಗಿ ಶನಿವಾರ ಬೆಳಗಾವಿಯ ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಫೆಬ್ರುವರಿ 14 ರಂದು ನಡೆಯಲಿರುವ ಭವ್ಯ ಜನ್ಮದಿನಾಚರಣೆಯಲ್ಲಿ ಕ್ಷೇತ್ರದ ಸುಮಾರು 15 ಸಾವಿರಕ್ಕೂ ಅಧಿಕ ಹಿರಿಯ ನಾಗರಿಕರು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹಿರಿಯರ ಮುಖದಲ್ಲಿ ನಗು ಮೂಡಿಸುವುದೇ ಸಚಿವೆಯರ ಮುಖ್ಯ ಉದ್ದೇಶವಾಗಿದ್ದು, ಮಧ್ಯಾಹ್ನ 2 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಕಾರ್ಯಕ್ರಮ ಕಳೆಗಟ್ಟಲಿದೆ.
ಹಿರಿಯ ನಾಗರಿಕರಲ್ಲಿ ಜೀವನೋತ್ಸಾಹ ತುಂಬಲು ಮ್ಯೂಸಿಕಲ್ ಚೇರ್, ಲಿಂಬು-ಚಮಚಾ ಸೇರಿದಂತೆ 10ಕ್ಕೂ ಹೆಚ್ಚು ಮೋಜಿನ ಆಟಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಸನ್ಮಾನ ಕೂಡ ನಡೆಯಲಿದೆ. ಕ್ಷೇತ್ರವು ಒಂದು ಕುಟುಂಬದಂತಿದ್ದು, ಜಾತಿ-ಧರ್ಮದ ಭೇದವಿಲ್ಲದೆ ಹಿರಿಯರ ಆಶೀರ್ವಾದ ಪಡೆಯುವುದು ನಮ್ಮ ಆಶಯ ಎಂದು ಹಟ್ಟಿಹೊಳಿ ತಿಳಿಸಿದರು. “ನುಡಿದಂತೆ ನಡೆದ ತಾಯಿ” ಎಂದು ಕ್ಷೇತ್ರದ ಜನರೇ ಪ್ರೀತಿಯಿಂದ ಕರೆಯುತ್ತಿರುವುದು ಸಚಿವೆಯವರ ಜನಪರ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.
