ಮಹಿಳೆಯರು ಕುಟುಂಬ ಮತ್ತು ಸಮಾಜದ ಬೆನ್ನೆಲುಬು, ಅವರ ಮಾನಸಿಕ ಆರೋಗ್ಯ ಕಾಪಾಡುವುದು ಇಡೀ ರಾಷ್ಟ್ರದ ಜವಾಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಮಹಿಳಾ ಮಾನಸಿಕ ಆರೋಗ್ಯ ಶೃಂಗಸಭೆ’ಯನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಆರೋಗ್ಯವಂತ ಕುಟುಂಬಗಳು ಶಕ್ತಿಶಾಲಿ ರಾಷ್ಟ್ರವನ್ನು ನಿರ್ಮಿಸುತ್ತವೆ ಎಂದು ಆಶಯ ವ್ಯಕ್ತಪಡಿಸಿದರು. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ದಶಕದಿಂದ ಸೇವೆ ಸಲ್ಲಿಸುತ್ತಿರುವ ‘Mpower’ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ಮಹಿಳೆಯರು ತಮ್ಮ ಮನಸ್ಸಿನ ತುಮುಲಗಳ ಬಗ್ಗೆ ಮಾತನಾಡುವ, ಕೇಳುವ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಣದ ಒತ್ತಡ ಎದುರಿಸುವ ಬಾಲಕಿಯಿಂದ ಹಿಡಿದು, ಮನೆ-ಕೆಲಸ ನಿಭಾಯಿಸುವ ಮಹಿಳೆಯವರೆಗೆ ಹಾಗೂ ಒಂಟಿತನ ಅನುಭವಿಸುವ ವೃದ್ಧೆಯವರೆಗೆ ಪ್ರತಿಯೊಬ್ಬರಿಗೂ ಮಾನಸಿಕ ಸ್ಥೈರ್ಯದ ಅಗತ್ಯವಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೇವಲ ಅಂಕಿ-ಅಂಶಗಳಲ್ಲ, ಅವು ಜೀವಗಳು ಮತ್ತು ಕುಟುಂಬಗಳ ಭವಿಷ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇದನ್ನು ಪರಿಹರಿಸಲು ಸರ್ಕಾರ, ಸಂಸ್ಥೆಗಳು ಮತ್ತು ಇಡೀ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಜಾರಿಗೆ ತಂದಿರುವ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ಯಂತಹ ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ ಎಂದು ತಿಳಿಸಿದರು. ಆರ್ಥಿಕ ಸ್ವಾವಲಂಬನೆಯು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರ ಮಾನಸಿಕ ಆರೋಗ್ಯದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ ನೀರಜಾ ಬಿರ್ಲಾ, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸೇರಿದಂತೆ ದೇಶ-ವಿದೇಶಗಳ ಖ್ಯಾತ ಮಾನಸಿಕ ತಜ್ಞರು ಉಪಸ್ಥಿತರಿದ್ದರು. ಮಹಿಳೆಯರ ಮೌನ ಹೋರಾಟಗಳಿಗೆ ಧ್ವನಿಯಾಗುವ ಮತ್ತು ಅವರ ಮಾನಸಿಕ ಹೊರೆಯನ್ನು ಹಗುರಗೊಳಿಸುವ ನಿಟ್ಟಿನಲ್ಲಿ ಈ ಶೃಂಗಸಭೆಯು ಹೊಸ ಆಲೋಚನೆಗಳಿಗೆ ನಾಂದಿ ಹಾಡಿತು.
