BELAGAVI

ಕಲುಷಿತಗೊಳ್ಳುತ್ತಿದೆ ಮಾರ್ಕಂಡೇಯ ನದಿ; ಸೇತುವೆಯನ್ನೇ ಕಸದ ತೊಟ್ಟಿ ಮಾಡಿದ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳ ಜಾಣ ಕುರುಡತನ!!!

Share

ಬೆಳಗಾವಿ ತಾಲೂಕಿನ ಜೀವನದಿ ಮಾರ್ಕಂಡೇಯ ಈಗ ಮಾಲಿನ್ಯದ ಸುಳಿಗೆ ಸಿಲುಕಿದೆ. ಹಿಂಡಲಗಾದಿಂದ ಮಣ್ಣೂರು-ಅಂಬೇವಾಡಿ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯ ಮೇಲೆ ಜನ ಎಸೆಯುತ್ತಿರುವ ಕಸ ಮತ್ತು ಪೂಜಾ ಸಾಮಗ್ರಿಗಳಿಂದ ನದಿ ನೀರು ವಿಷಕಾರಿಯಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

ಬೆಳಗಾವಿ ತಾಲೂಕಿನ ಹಿಂಡಲಗಾದಿಂದ ಮಣ್ಣೂರು-ಅಂಬೇವಾಡಿ ಗ್ರಾಮದ ಮಧ್ಯದಲ್ಲಿ ಸಂಪರ್ಕ ಕಲ್ಪಿಸುವ ಮಾರ್ಕಂಡೇಯ ನದಿಯ ಸೇತುವೆಯು ಈಗ ಅಕ್ಷರಶಃ ಕಸದ ರಾಶಿಯಾಗಿ ಮಾರ್ಪಟ್ಟಿದೆ. ಸೇತುವೆಯ ಮೇಲೆ ಮತ್ತು ನದಿಯ ಒಡಲಲ್ಲಿ ದೇವರ ಹಳೆಯ ಮೂರ್ತಿಗಳು, ಫೋಟೋಗಳು, ಹಳೆಯ ಬಟ್ಟೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಎಸೆಯಲಾಗುತ್ತಿದೆ. ಇದರಿಂದ ನದಿಯ ಪವಿತ್ರತೆ ಹಾಳಾಗುತ್ತಿರುವುದಲ್ಲದೆ, ನೀರು ಸಂಪೂರ್ಣ ಕಲುಷಿತಗೊಂಡು ಇಡೀ ವಾತಾವರಣ ಗಬ್ಬು ವಾಸನೆಯಿಂದ ಕೂಡಿದೆ. ಪೂಜಾ ನೈರ್ಮಲ್ಯದ ಹೆಸರಿನಲ್ಲಿ ನದಿಗೆ ಎಸೆಯಲಾಗುತ್ತಿರುವ ಈ ಕಸವು ಜಲಚರಗಳ ಜೀವಕ್ಕೂ ಕುತ್ತು ತರುತ್ತಿದೆ.

ದುರಂತವೆಂದರೆ, ಇದೇ ಮಾರ್ಗವಾಗಿ ನಿತ್ಯ ಸಂಚರಿಸುವ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಗಂಭೀರ ಸಮಸ್ಯೆಯ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಮಳೆಗಾಲದಲ್ಲಿ ಇದೇ ಕಲುಷಿತ ನೀರು ಅಕ್ಕಪಕ್ಕದ ಗ್ರಾಮಗಳಿಗೆ ಹರಿದು ಹೋಗುತ್ತಿದ್ದು, ಹೊಲಸು ವಾತಾವರಣದೊಂದಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಗ್ರಾಮಸ್ಥರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು, ನದಿಯ ಸ್ವಚ್ಛತೆಗೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Tags:

error: Content is protected !!