ಪ್ರತಿಭೆ ಎಲ್ಲಿದ್ದರೂ ಅದು ಬೆಳಕಿಗೆ ಬಂದೇ ಬರುತ್ತದೆ ಎಂಬುದಕ್ಕೆ ಖಾನಾಪೂರದ ಈ ಹೆಣ್ಣು ಮಗಳೇ ಸಾಕ್ಷಿ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮರಿಯಮ್ಮ ಮುಲ್ಲಾ ಅವರಿ ತಮ್ಮ ಅದ್ಭುತ ಸಾಧನೆಯ ಮೂಲಕ ಹಾರಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಎಮ್.ಜಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮರಿಯಮ್ಮ ಮುಲ್ಲಾ ಅವರು 2025-26ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ ಸ್ಪರ್ಧೆಯ ವೈಯಕ್ತಿಕ ವಿಭಾಗದ ‘ಉರ್ದು ಭಾಷಣ’ದಲ್ಲಿ ಮರಿಯಮ್ಮ ಅವರು ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದುಕೊಂಡು ಶಾಲಾ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ಕಲಬುರ್ಗಿ ಅಪರ ಆಯುಕ್ತರ ಕಛೇರಿ ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಈ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿನಿ ಮರಿಯಮ್ಮ ಅವರನ್ನು ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮರಿಯಮ್ಮ ಅವರ ಈ ಗಮನಾರ್ಹ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮೀಣ ಭಾಗದ ಪ್ರತಿಭೆ ಇಂದು ಇಡೀ ರಾಜ್ಯದ ಗಮನ ಸೆಳೆದಿರುವುದು ಹೆಮ್ಮೆಯ ವಿಷಯವಾಗಿದೆ.
