Belagavi

ರಾಜಹಂಸಗಡದಲ್ಲಿ ಮೊಳಗಿದ ಮರಾಠಿ ಕಹಳೆ: ಭವ್ಯವಾಗಿ ಜರುಗಿದ ‘ರಾಜಭಾಷಾ ದಿನ’ ಹಾಗೂ ಕುಸುಮಾಗ್ರಜರ ಜಯಂತಿ

Share

ಬೆಳಗಾವಿಯ ಐತಿಹಾಸಿಕ ರಾಜಹಂಸ ಗಡ ಇಂದು ಮರಾಠಿ ಭಾಷಾ ಪ್ರೇಮಕ್ಕೆ ಸಾಕ್ಷಿಯಾಯಿತು. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮರಾಠಿ ರಾಜಭಾಷಾ ದಿನ ಹಾಗೂ ಹಿರಿಯ ಕವಿ ಕುಸುಮಾಗ್ರಜರ ಜಯಂತಿ ಕಾರ್ಯಕ್ರಮವು ಗಡದ ಆವರಣದಲ್ಲಿ ಅತ್ಯಂತ ಸಡಗರದಿಂದ ನೆರವೇರಿತು. ಗಡದ ಮೇಲಿರುವ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಮುಂದೆ ಭಾಷಾಭಿಮಾನಿಗಳು ಒಗ್ಗೂಡಿ ಮರಾಠಿ ಅಸ್ಮಿತೆಯ ಸಂಕಲ್ಪ ಮಾಡಿದರು.”
ಕಾರ್ಯಕ್ರಮದ ಆರಂಭದಲ್ಲಿ ಗಡದ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ಆರತಿ ನೆರವೇರಿಸಲಾಯಿತು. ನಂತರ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗಣ್ಯರು ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೀಮಾಕವಿ ರವೀಂದ್ರ ಪಾಟೀಲ್ ಮಾತನಾಡಿ, “ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಮಾತ್ರ ನಮ್ಮ ಅಸ್ಮಿತೆ ಜೀವಂತವಾಗಿರುತ್ತದೆ” ಎಂದು ಕರೆ ನೀಡಿದರು. ಮರಾಠಿ ಭಾಷೆಯ ಸಾಹಿತ್ಯಿಕ ಪರಂಪರೆ ಮತ್ತು ಬೆಳಗಾವಿ ಗಡಿಭಾಗದ ಜನರ ಹೋರಾಟದ ಹಾದಿಯನ್ನು ಅವರು ಶ್ಲಾಘಿಸಿದರು.

ಹಿರಿಯ ಸಾಹಿತಿ ಗುಣವಂತ ಪಾಟೀಲ್ ಅವರು ಕವಿ ಕುಸುಮಾಗ್ರಜರ ಕವಿತೆಗಳನ್ನು ಸ್ಮರಿಸುತ್ತಾ, ಗಡಿಭಾಗದ ಜನರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಇರಬೇಕು ಎಂದು ಮನವಿ ಮಾಡಿದರು. ಶಿವಸಂತ ಸಂಜಯ್ ಮೋರೆ ಅವರು ಮಾತನಾಡಿ, ಶಿವಾಜಿ ಮಹಾರಾಜರು ಮರಾಠಿ ಶಬ್ದಕೋಶವನ್ನು ಸಿದ್ಧಪಡಿಸಿ ಭಾಷೆಗೆ ಆಡಳಿತಾತ್ಮಕ ಗೌರವ ತಂದುಕೊಟ್ಟಿದ್ದರು, ಇಂದು ಈ ಭಾಷೆ ವೈಜ್ಞಾನಿಕವಾಗಿ ಬೆಳೆಯಬೇಕಿದೆ ಎಂದರು. ಇದೇ ವೇಳೆ ಮಾರ್ಚ್ 15 ರಿಂದ ಶುರುವಾಗಲಿರುವ ‘ಮರಾಠಿ ಸನ್ಮಾನ ಯಾತ್ರೆ’ಗೆ ಬೆಂಬಲ ನೀಡುವಂತೆ ಕೋರಲಾಯಿತು.
ಸಮಿತಿಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Tags:

error: Content is protected !!