BELAGAVI

ಬೆಳಗಾವಿಯಲ್ಲಿ ಮಾರ್ಚ್ 1ಕ್ಕೆ ಮರಾಠಿ ಭಾಷಾ ಗೌರವ ದಿನಾಚರಣೆ: ನಟ ಹೇಮಂತ್ ಢೋಮೆ ಮುಖ್ಯ ಅತಿಥಿ

Share

ಮರಾಠಿ ಭಾಷಾ ಗೌರವ ದಿನದ ನಿಮಿತ್ತ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ವತಿಯಿಂದ ಮಾರ್ಚ್ 1 ರಂದು ನಗರದ ಮರಾಠಾ ಮಂದಿರದಲ್ಲಿ ಭವ್ಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಾಠಿ ಚಿತ್ರರಂಗದ ಪ್ರಸಿದ್ಧ ನಟ, ಬರಹಗಾರ ಹಾಗೂ ನಿರ್ದೇಶಕ ಹೇಮಂತ್ ಢೋಮೆ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ‘ಕ್ರಾಂತಿಜ್ಯೋತಿ ವಿದ್ಯಾಲಯ-ಮರಾಠಿ ಮಾಧ್ಯಮ’ ಚಿತ್ರದ ಮೂಲಕ ಮರಾಠಿ ಶಾಲೆಗಳ ಮಹತ್ವ ಸಾರಿದ್ದ ಢೋಮೆ, ಸಮಾರಂಭದಲ್ಲಿ “ಮರಾಠಿ ಶಾಲೆಗಳ ಅಸ್ತಿತ್ವ ಮತ್ತು ಮರಾಠಿ ಭಾಷೆಯ ಸಂವರ್ಧನೆ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಜನವರಿ ತಿಂಗಳಿನಲ್ಲಿ ನಡೆದ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಬೆಳಗಾವಿ ಮತ್ತು ಸೀಮಾ ಭಾಗದ ಸುಮಾರು 3,000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರತಿಭಾವಂತರಿಗೆ ‘ಆದರ್ಶ ಶಾಲೆ’ ಪ್ರಶಸ್ತಿ ಹಾಗೂ 10ನೇ ತರಗತಿಯಲ್ಲಿ ಸಾಧನೆ ಮಾಡಿದ ಗುಣವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ನೀಡಲಾಗುವುದು. ‘ಜಿಮ್ಮಾ’, ‘ಸನ್ನಿ’, ‘ಬಘ್ತೋಸ್ ಕಾಯ್ ಮುಜ್ರಾ ಕರ್’ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ಹೇಮಂತ್ ಢೋಮೆ ಅವರ ಉಪಸ್ಥಿತಿಯು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಯುವ ಸಮಿತಿಯ ಅಧ್ಯಕ್ಷ ಅಂಕುಶ ಕೇಸರಕರ್ ಮತ್ತು ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಮರಾಠಿ ಭಾಷೆಯ ಅಭಿಮಾನ ಜಾಗೃತಗೊಳಿಸಲು ಮತ್ತು ಯುವ ಪೀಳಿಗೆಯನ್ನು ಪ್ರೋತ್ಸಾಹಿಸಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಮಾರ್ಚ್ 1 ರಂದು ಮಧ್ಯಾಹ್ನ 3 ಗಂಟೆಗೆ ಮರಾಠಾ ಮಂದಿರಕ್ಕೆ ಶಿಕ್ಷಕರು, ಪೋಷಕರು ಹಾಗೂ ಭಾಷಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

Tags:

error: Content is protected !!