“ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಈಗ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಗೊಂದಲದ ಹೇಳಿಕೆ ನೀಡುವವರಿಗೆ ಬೀದಿ ನಾಯಿಗಳ ಉದಾಹರಣೆ ನೀಡುವ ಮೂಲಕ ಸಚಿವರು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಗೊಂದಲಗಳಿಗೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಸದ್ಯದ ನಾಯಕತ್ವ ಗಟ್ಟಿಯಾಗಿದೆ” ಎಂದು ಸ್ಪಷ್ಟಪಡಿಸಿದರು. ಹೈಕೋರ್ಟ್ನ ಬೀದಿ ನಾಯಿಗಳ ಕುರಿತಾದ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಪಕ್ಷದೊಳಗೆ ಇಲ್ಲದ ಗೊಂದಲ ಸೃಷ್ಟಿಸುವವರಿಗೆ ಈ ಮೂಲಕ ಕಟುವಾದ ಎಚ್ಚರಿಕೆ ನೀಡಿದರು. ಮುಂದುವರಿದು ಮಾತನಾಡಿದ ಸಚಿವರು, “ನಾಯಿ ತನ್ನ ಬಾಲವನ್ನು ಅಲ್ಲಾಡಿಸಬಹುದೇ ಹೊರತು, ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ” ಎನ್ನುವ ಮೂಲಕ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಮತ್ತು ಸರ್ವೋಚ್ಚ ಎಂಬ ಸಂದೇಶವನ್ನು ರವಾನಿಸಿದರು. ಈ ಮಾರ್ಮಿಕ ಹೇಳಿಕೆಯ ಮೂಲಕ ಸ್ವಪಕ್ಷೀಯರೇ ಆದರೂ ಸರಿ ಅಥವಾ ವಿರೋಧ ಪಕ್ಷದವರೇ ಆದರೂ ಸರಿ, ನಾಯಕತ್ವದ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಸಚಿವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
