ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಅಟ್ಟಹಾಸ ಮೆರೆದಿದೆ. ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಿದ್ದ ಮಹಿಳೆ ಸೇರಿದಂತೆ ಏಳೆಂಟು ಜನರ ಮೇಲೆ ದಾಳಿ ನಡೆಸಿರುವ ನಾಯಿ, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ನಾಯಿ ಕಚ್ಚುತ್ತಿರುವ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಶಾಸ್ತ್ರಿ ನಗರದಲ್ಲಿ ಇಂದು ಬೆಳಿಗ್ಗೆ ಹುಚ್ಚು ನಾಯಿಯೊಂದು ಸಾರ್ವಜನಿಕರ ಮೇಲೆ ಸರಣಿ ದಾಳಿ ನಡೆಸಿದೆ. ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ನಾಯಿ ಮನಬಂದಂತೆ ಕಚ್ಚಿದ್ದು, ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಗಲ್ಲಿಯ ಇತರ ೪-೫ ಜನರಿಗೂ ನಾಯಿ ಗಾಯಗೊಳಿಸಿದೆ. ಒಟ್ಟು ೭ ರಿಂದ ೮ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಭೀಕರ ಘಟನೆಯ ಲೈವ್ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದಾಗಿ ಗ್ರಾಮದ ಮಹಿಳೆಯರು ಮತ್ತು ಪುಟ್ಟ ಮಕ್ಕಳಲ್ಲಿ ತೀವ್ರ ಭೀತಿ ಆವರಿಸಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಮಾಜ ಸೇವಕ ಗಜಾನನ ಗವ್ಹಾಣೆ ಹಾಗೂ ಸುನೀತಾ ಗವ್ಹಾಣೆ ಅವರು ಗ್ರಾಮ ಪಂಚಾಯತ್ ಪಿಡಿಒ ರೇವತಿ ಶಿಗಂಗೆ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪಿಡಿಒ ಮತ್ತು ಸಿಬ್ಬಂದಿ ವರ್ಗದವರು, ಗಜಾನನ ಗವ್ಹಾಣೆ ಹಾಗೂ ಗಲ್ಲಿಯ ಯುವಕರ ಸಹಾಯದೊಂದಿಗೆ ಅಟ್ಟಹಾಸ ಮೆರೆಯುತ್ತಿದ್ದ ಹುಚ್ಚು ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ತಹಬದಿಗೆ ಬಂದಿದ್ದರೂ, ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಗ್ರಾಮಸ್ಥರು ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಕತಿ ಗ್ರಾಮದಲ್ಲಿ ದಿನೇ ದಿನೇ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ಈ ಹಿಂದೆ ಸಮಾಜ ಸೇವಕ ಗಜಾನನ ಗವ್ಹಾಣೆ ಅವರು ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವೃದ್ಧರು ಮತ್ತು ಮಕ್ಕಳನ್ನು ನಾಯಿಗಳಿಂದ ರಕ್ಷಿಸುವುದೇ ಸವಾಲಾಗಿದೆ, ನಾವು ಯಾರಿಗೆ ದೂರು ನೀಡಬೇಕು?” ಎಂದು ಪ್ರಶ್ನಿಸಿರುವ ಅವರು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
