BELAGAVI

ಬೆಳಗಾವಿಯಲ್ಲಿ ಲಾರಿ ಚಾಲಕನ ಮೇಲೆ ಚಾಕು ಇರಿತ !!!

Share

ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಭಯಾನಕ ವಾತಾವರಣ ಸೃಷ್ಟಿಸಿದ್ದ ಗ್ಯಾಂಗ್‌ವೊಂದನ್ನು ಕೇವಲ 24 ಗಂಟೆಯಲ್ಲೇ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬೆಳಗಾವಿಯ ಬಿ. ಶಂಕರಾನಂದ ಮೂರ್ತಿ ವೃತ್ತದ ಬಳಿ ನಡೆದಿದ್ದ ಈ ಕೃತ್ಯದ ಕುರಿತು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಇಂದು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲಾರಿ ಚಾಲಕ ಶಿನೋಳಿಯಿಂದ ಬೆಳಗಾವಿಗೆ ಬರುತ್ತಿದ್ದಾಗ ಸೋನವಾಲಕರ ವೈನ್ ಶಾಪ್ ಹತ್ತಿರವಿರುವ ಹಂಪ್ ಬಳಿ ಲಾರಿಗೆ ಬ್ರೇಕ್ ಹಾಕಿದ್ದಾರೆ. ಈ ವೇಳೆ ಉಂಟಾದ ಭಾರಿ ಶಬ್ದದಿಂದ ಕುಪಿತಗೊಂಡ ಮೂವರು ಸ್ಕೂಟಿ ಸವಾರರು, ‘ನಮ್ಮನ್ನು ಸಾಯಿಸುತ್ತೀಯಾ?’ ಎಂದು ಲಾರಿ ಚಾಲಕ ಅಯಾಜ್ ಅಹ್ಮದ್ ಸವಣೂರು ಜೊತೆ ಜಗಳ ತೆಗೆದಿದ್ದಾರೆ. ಅಲ್ಲಿಂದ ಲಾರಿಯನ್ನು ಬೆನ್ನಟ್ಟಿದ ಆರೋಪಿಗಳು ಬಿ. ಶಂಕರಾನಂದ ಮೂರ್ತಿ ವೃತ್ತದ ಬಳಿ ಲಾರಿಗೆ ಕಲ್ಲು ಎಸೆದಿದ್ದಾರೆ. ಈ ವೇಳೆ ಆಯತಪ್ಪಿ ಸ್ಕೂಟಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಮತ್ತಷ್ಟು ಕೆರಳಿದ ಅಥರ್ವ ಗುಂಡು ಉಸೂಲಕರ, ಪ್ರಶಾಂತ, ನಾಗೇಶ್ ಡಾಂಗೆ ಮತ್ತು ನೀಲಕಂಠ ಮುರುಗೋಡ ಎಂಬುವವರು ಲಾರಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಘಟನೆ ನಡೆದ 24 ಗಂಟೆಯೊಳಗೆ ಕ್ಯಾಂಪ್ ಪಿಐ ಆನಂದ್ ಹಾಗೂ ಸಿಸಿಬಿ ಪಿಐ ನಂದೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಗರದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಚಾಕು ಇರಿಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಹತ್ತಿಕ್ಕಲು ಆಯುಕ್ತರು ವಿಶೇಷ ‘ಚುಚ್ಚು ವಿರೋಧ’ ಕಾರ್ಯಾಚರಣೆ ತಂಡವನ್ನು ರಚಿಸಿದ್ದಾರೆ.

Tags:

error: Content is protected !!