BELAGAVI

ನರರೋಗ ಶಸ್ತ್ರಚಿಕಿತ್ಸೆಯ ಬಹುದಿನಗಳ ಕನಸು ನನಸು – ಬಿಮ್ಸ್’ನಲ್ಲಿ ಬಡ ರೋಗಿಗಳಿಗೆ ಉಚಿತ ಹೈಟೆಕ್ ಸೇವೆ

Share

ಬೆಳಗಾವಿ ಜಿಲ್ಲಾಸ್ಪತ್ರೆ ಅಥವಾ ಬಿಮ್ಸ್ (BIMS) ಈಗ ಕೇವಲ ಸಾಮಾನ್ಯ ಆಸ್ಪತ್ರೆಯಾಗಿ ಉಳಿದಿಲ್ಲ, ಅದು ಬಡವರ ಪಾಲಿನ ಸಂಜೀವಿನಿಯಾಗಿದೆ. ನರರೋಗದಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಅಥವಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅಲೆಯುತ್ತಿದ್ದ ಜನರಿಗೆ ಈಗ ಜಿಲ್ಲಾಸ್ಪತ್ರೆಯಲ್ಲೇ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ನರರೋಗ ಶಸ್ತ್ರಚಿಕಿತ್ಸೆ ನಡೆಯಬೇಕೆಂಬ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಇತ್ತೀಚೆಗೆ ಡಾ. ಬಸವರಾಜ್ ಮತ್ತು ಅವರ ಪರಿಣಿತ ವೈದ್ಯರ ತಂಡವು ಅತ್ಯಂತ ಸಂಕೀರ್ಣವಾದ ನರಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಬಡ ಬಾಲಕಿಯೊಬ್ಬಳಿಗೆ ಮರುಜೀವ ನೀಡಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದ್ದು, ಇವುಗಳ ಸಮರ್ಪಕ ಬಳಕೆಯಿಂದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಕಳೆದ ಹಲವಾರು ವರ್ಷಗಳಿಂದ ಜಾತಿ ಧರ್ಮದ ಬೇಧಭಾವ ಮಾಡದೇ, ಜನಸೇವೆಯನ್ನೇ ತನ್ನ ಉಸಿರಾಗಿಸಿಕೊಂಡ ಸಮಾಜ ಸೇವಕ ಅಬ್ದುಲ್ ಖಾದೀರ್ ಘೀವಾಲೆ ಅವರು ಈ ಪುಣ್ಯದ ಕೆಲಸಕ್ಕೆ ಕೈಜೋಡಿಸಿದ್ದು, ಆರ್ಥಿಕವಾಗಿ ಹಿಂದುಳಿದ ಬಾಲಕಿಯ ಶಸ್ತ್ರಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ವೈದ್ಯರ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವ ಅವರು, ಜಿಲ್ಲಾಸ್ಪತ್ರೆಯ ಈ ಬದಲಾವಣೆ ಬಡವರಿಗೆ ವರದಾನ ಎಂದಿದ್ದಾರೆ. ಹಿಂದೆ ಇಂತಹ ಚಿಕಿತ್ಸೆಗಳಿಗಾಗಿ ರೋಗಿಗಳು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಅಥವಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಜಿಲ್ಲಾಸ್ಪತ್ರೆಯಲ್ಲೇ ಈ ಸೌಲಭ್ಯ ದೊರೆಯುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Tags:

error: Content is protected !!