Hukkeri

ಶಿವಾನಂದ ಗ್ರಾಮೀಣ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ: ಸಚಿವ ಸತೀಶ್‌ ಜಾರಕಿಹೊಳಿ

Share

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಜಮೀನು ಮಂಜೂರುಗೊಳಿಸಿದ್ದು ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠವು ಜ್ಞಾನಕೇಂದ್ರವಾಗಿ ಬೆಳೆಯಲಿ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠದ ಶ್ರೀ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ ಸರ್ಕಾರದ ವತಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ 9 ಎಕರೆ ಜಮೀನು ಮಂಜೂರುಗೊಳಿಸಿದ ಹಿನ್ನೆಲೆ ಮಠದ ಆಡಳಿತ ಮಂಡಳಿ ಹಾಗೂ ಸದ್ಭಕ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಘೋಡಗೇರಿಯ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ ಸರ್ಕಾರದ ವತಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ 9 ಎಕರೆ ಜಮೀನು ಮಂಜೂರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಜಮೀನು ಮಂಜೂರುಗೊಳಿಸಿದ್ದೇವೆ. ಕಳೆದ 30 ವರ್ಷಗಳ ರಾಜಕೀಯದಲ್ಲಿ ನಾವು ಮೊದಲ ಪ್ರಾಶಸ್ತ್ಯ ವನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ 99 % ಶಾಲಾ- ಕಾಲೇಜುಗಳನ್ನು ಅಭಿವೃದ್ಧಿಗೊಳಿಸಿದ್ದು, ಮುಂದೆಯೂ ಈ ಕೆಲಸ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಕಕಮರಿ ಮಠದ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ ಮಾತನಾಡಿ, ಮಾತು ಕಡಿಮೆ, ಮೌನ ಬಂಗಾರವೆಂಬ ಗಾದೆ ಮಾತಿನಂತೆ ಕಾರ್ಯ ನಿರ್ಮಹಿಸುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅವರು ಮುಖ್ಯಮಂತ್ರಿಯಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿಹೊಂದಲು ಸಾಧ್ಯವಿದೆ. ಸಚಿವರು ಜಾತಿಮೇಲೆ ಯಾವತ್ತು ರಾಜಕಾರಣ ಮಾಡಲಿಲ್ಲ, ಅವರ ಅಭಿವೃದ್ಧಿ ಪರ ನಿಲುವು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಮುಂದೆಯೂ ಅವರ ಅಭಿವೃದ್ಧಿಪರ ರಾಜಕೀಯಕ್ಕೆ ನಾವೆಲ್ಲರೂ ಸೇರಿ ಶಕ್ತಿ ತುಂಬೋಣ ಎಂದು ಕರೆ ನೀಡಿದರು.

ಶಿವಾನಂದ ಮಠದ ಪರಮಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮೀಜಿ ಮಾತನಾಡಿ, ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಸರ್ಕಾರದಿಂದ ಜಮೀನು ಮಂಜೂರುಗೊಳಿಸಿದ ಹಿನ್ನೆಲೆ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಯಾರಗುಡ್ಡ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಾಟೀಲ್, ಮುಖಂಡರಾದ ಬಸವರಾಜ ಮಟಗಾರ, ರಿಷಬ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!