ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ರಸ್ತೆ ಕಾಮಗಾರಿ ವಿಳಂಬ ಖಾನಾಪುರಿಗರ ಸಹನೆ ಕಟ್ಟೆ ಒಡೆಯುವಂತೆ ಮಾಡಿದೆ. ವ್ಯಾಪಾರ ವಹಿವಾಟು ಕುಸಿದು ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಇಂದು ಪಕ್ಷಾತೀತವಾಗಿ ಇಡೀ ಪಟ್ಟಣವೇ ಸ್ತಬ್ಧಗೊಂಡು ಪ್ರತಿಭಟನೆ ನಡೆಸಿದೆ.


ಕಳೆದ ಹಲವಾರು ತಿಂಗಳುಗಳಿಂದ ಗೋವಾ ಕ್ರಾಸ್‌ನಿಂದ ಜಾಂಬೋಟಿ ಕ್ರಾಸ್‌ವರೆಗೆ ನಡೆಯುತ್ತಿರುವ ರಸ್ತೆ ನಿರ್ಮಾಣ ಕೆಲಸ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕು ಕಚೇರಿ ಸೇರಿದಂತೆ ವಿವಿಧ ಕೆಲಸಗಳಿಗೆ ಪಟ್ಟಣಕ್ಕೆ ಬರುವ ನಾಗರಿಕರು ಹಾಗೂ ವಾಹನ ಸವಾರರು ಪ್ರತಿದಿನ ಹೈರಾಣಾಗುತ್ತಿದ್ದಾರೆ. ರಸ್ತೆ ಕಾಮಗಾರಿಗಾಗಿ ಸಂಚಾರ ಮಾರ್ಗ ಬದಲಿಸಿರುವುದರಿಂದ ಪಟ್ಟಣದ ಒಳಗೆ ಜನಸಂಚಾರ ಕ್ಷೀಣಿಸಿದ್ದು, ಇದರಿಂದ ಸ್ಥಳೀಯ ವ್ಯಾಪಾರಸ್ಥರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವ್ಯಾಪಾರಸ್ಥರು ಮತ್ತು ನಾಗರಿಕರು ಒಂದಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಪಿಡಬ್ಲ್ಯೂಡಿ (PWD) ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ದುಂಡಪ್ಪ ಕೋಮಾರ ಸೇರಿದಂತೆ ಪ್ರಮುಖರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, “ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ತಿಂಗಳು ಬೇಕು? ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿರುವುದು ಕಾಣಿಸುತ್ತಿಲ್ಲವೇ?” ಎಂದು ಪ್ರಶ್ನಿಸಿದರು. ಕೂಡಲೇ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಲಿಖಿತ ಭರವಸೆ ನೀಡಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಇಡೀ ಪಟ್ಟಣವೇ ಇವತ್ತು ಬೀದಿಗಿಳಿದು ಚಳಿ ಬಿಡಿಸಿದೆ.
