ಬೆಳಗಾವಿಯಲ್ಲಿ ಖಾಕಿ ಭೇಟೆ: ಅಕ್ರಮ ಮದ್ಯ ಮಾರಾಟಗಾರ ಮತ್ತು ಗಾಂಜಾ ವ್ಯಸನಿ ಪೊಲೀಸ್ ವಶಕ್ಕೆ
ನಮಸ್ಕಾರ, ಬೆಳಗಾವಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಮಾರಿಹಾಳ ಮತ್ತು ಖಡೇಬಜಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದು, ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಾಂಬ್ರಾ ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾದೇವ ನಗರದ ನಿವಾಸಿ ಸಂದೀಪ ರಾಮಚಂದ್ರ ನಾಯಿಕ (39) ಎಂಬಾತ ಉಡುಪಿ ಟೀ ಸ್ಟಾಲ್ ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾಗ, ಎಎಸ್‌ಐ ಎಮ್.ಎಸ್. ರುದ್ರಾಪೂರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಆರೋಪಿಯಿಂದ 400 ರೂಪಾಯಿ ಮೌಲ್ಯದ ವಿವಿಧ ಬ್ರ್ಯಾಂಡ್‌ನ ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಖಡೇಬಜಾರ ಠಾಣೆ ಪೊಲೀಸರು ಶಿವಾಜಿ ರಸ್ತೆಯ ಬೇಲ್ಡಕ್ ಚಿಕನ್ ಸೆಂಟರ್ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಮುಜಾಹಿದ ವಹೀದಅಹ್ಮದ ನಾಯ್ಕವಾಡಿ (28) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಆನಂದ ಆದಗೊಂಡ ಅವರ ತಂಡವು ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆಯ ನಂತರ ಆರೋಪಿಯ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಶ್ಲಾಘಿಸಿದ್ದಾರೆ.
