ಬೆಳಗಾವಿಯ ಕಾಕತಿ ಮೂಲದ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ಸ್ನೇಹಸಮ್ಮಿಲನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭವು ನೆಹರೂ ನಗರದ ಡಾ. ಬಿ.ಎಸ್. ಜಿರಗೆ ಸಭಾಭವನದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಪ್ರತಿಭಾವಂತ ವಿದ್ಯಾರ್ಥಿಗಳ ಕಲಾ ಪ್ರದರ್ಶನ ಇಡೀ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.


ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿಗಳಾದ ಡಾ. ಜ್ಯೋತಿ ಭಟ್ ಮತ್ತು ದೀಕ್ಷಾ ಶುಕ್ಲಾ ಮತ್ತು ಚೇರಮನ್ನರಾದ ಪ್ರಸಾದ್ ಪೀಟರ್ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಕಲೆಗಳಲ್ಲಿ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು. ಶಾಲೆಯ ಅಧ್ಯಕ್ಷರಾದ ಪ್ರಸಾದ್ ಪೀಟರ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶುಭಂ ಹಿರೇಮಠ ಅವರನ್ನು ‘ಅತ್ಯುತ್ತಮ ವಿದ್ಯಾರ್ಥಿ’ ಹಾಗೂ ಶ್ರಾವಣಿ ಬಡಿಗೇರ ಅವರನ್ನು ‘ಅತ್ಯುತ್ತಮ ವಿದ್ಯಾರ್ಥಿನಿ’ ಎಂದು ಪುರಸ್ಕರಿಸಲಾಯಿತು.
ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಭೂಮಿಕಾ ಯಾದವ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ವಿವಿಧ ಹಾಡುಗಳಿಗೆ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು. ಶಿಕ್ಷಕಿ ಪಂಕಜಾ ಹೂಲಿಕವಿ ಕಾರ್ಯಕ್ರಮ ನಿರೂಪಿಸಿದರೆ, ಸೃಷ್ಟಿ ಕಡಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಗೌಡ ಸುನಗಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
