Kagawad

ಉಗಾರದ ಭೀಕರ ಮನೆ ಕಳ್ಳತನ ಪ್ರಕರಣ ಭೇದಿಸಿದ ಕಾಗವಾಡ ಪೊಲೀಸರು: ಇಬ್ಬರು ಆರೋಪಿಗಳ ಬಂಧನ, 20 ಲಕ್ಷ ಮೌಲ್ಯದ ಸ್ವತ್ತು ವಶ

Share

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಉಗಾರ ಖುರ್ದ್ ಪಟ್ಟಣದಲ್ಲಿ ನಡೆದಿದ್ದ ಬೃಹತ್ ಮೊತ್ತದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉಗಾರ ಖುರ್ದ್ ನಿವಾಸಿ ಜಿನ್ನಪ್ಪಾ ಶ್ರೀಪಾಲ ಮಾಕ್ಕನ್ನವರ ಅವರು ನೀಡಿದ ದೂರಿನನ್ವಯ ಫೆಬ್ರವರಿ 10ರಂದು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆಬ್ರವರಿ 9ರ ಬೆಳಿಗ್ಗೆಯಿಂದ ಫೆಬ್ರವರಿ 10ರ ಮಧ್ಯಾಹ್ನದ ಅವಧಿಯಲ್ಲಿ ಮಾಕ್ಕನ್ನವರ ಅವರು ತಮ್ಮ ಮನೆಗೆ ಬೀಗ ಹಾಕಿದ್ದ ಸಂದರ್ಭವನ್ನು ಸಂಚು ರೂಪಿಸಿದ್ದ ಕಳ್ಳರು, ಬೀಗ ಮುರಿದು ಒಳನುಗ್ಗಿದ್ದರು. ಮನೆಯಲ್ಲಿದ್ದ ಭಾರೀ ಪ್ರಮಾಣದ ಚಿನ್ನಾಭರಣ, ಬೆಳ್ಳಿ ಆಭರಣಗಳು, ಡೈಮಂಡ್ ಉಂಗುರ ಹಾಗೂ ನಗದು ಸೇರಿದಂತೆ ಒಟ್ಟು ಸುಮಾರು 22 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಈ ಹಗಲು ದರೋಡೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಸಿಪಿಐ ಸಂತೋಷ ಹಳ್ಳೂರು ಅವರ ನೇತೃತ್ವದಲ್ಲಿ ಪಿಎಸ್‌ಐ ರಾಘವೇಂದ್ರ ಖೋತ್ ಹಾಗೂ ಸಿಬ್ಬಂದಿ ವರ್ಗದವರು ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ ಉಗಾರ ಖುರ್ದ್ ನಿವಾಸಿಗಳಾದ ಯಾಸಿನ್ ನಬೀಸಾಬ ಸುತಾರ (29) ಹಾಗೂ ಜಮೀರ್ ಶೌಕತ್ ಅಲಿ ಜಮಾದಾರ (37) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 143 ಗ್ರಾಂ ಚಿನ್ನಾಭರಣ, 858 ಗ್ರಾಂ ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 19.58 ಲಕ್ಷ ರೂಪಾಯಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಅತ್ಯಂತ ವೇಗವಾಗಿ ಕಳ್ಳರನ್ನು ಪತ್ತೆಹಚ್ಚಿದ ಕಾಗವಾಡ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Tags:

error: Content is protected !!