Vijaypura

ಜೆಡಿಎಸ್‌ನಿಂದ ಏಳು ಜಿಲ್ಲೆಗಳ ಕಿತ್ತೂರು ಕರ್ನಾಟಕದ ಜನತಾ ಸಮಾವೇಶವನ್ನು ವಿಜಯಪುರದಲ್ಲಿ ಆಯೋಜನೆ

Share

‘ಜೆಡಿಎಸ್ ಸ್ಥಾಪನೆಯಾಗಿ 25 ವರ್ಷವಾಗಿರುವುದರಿಂದ ನಾಡಿನಾದ್ಯಂತ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ. ಫೆ.27ರಂದು ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಏಳು ಜಿಲ್ಲೆಗಳ ಕಿತ್ತೂರು ಕರ್ನಾಟಕದ ಜನತಾ ಸಮಾವೇಶವನ್ನು ವಿಜಯಪುರದಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು. ‘ದೇವೇಗೌಡರು ಕಟ್ಟಿ ಬೆಳೆಸಿದ ಪ್ರಾದೇಶಿಕ ಪಕ್ಷ ಜೆಡಿಎಸ್ ನಾಯಕರನ್ನು ತಯಾರು ಮಾಡುವ ಕಾರ್ಖಾನೆ. ಪಕ್ಷ ಸದೃಢವಾಗಿದೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್ ತನ್ನ ಜಾತ್ಯತೀತ ಧೋರಣೆಯಿಂದ ಹಿಂದೆ ಸರಿದಿಲ್ಲ’ ಎಂದು ಹೇಳಿದರು. ‘ಜನತಾದಳ ಪಕ್ಷ ಸರ್ವ ಜನಾಂಗಕ್ಕೂ, ಸರ್ವ ಸಮಾಜಕ್ಕೂ ನ್ಯಾಯ ಒದಗಿಸಿದೆ. ಪಕ್ಷ ತನ್ನ ಶಕ್ತಿ, ವರ್ಚಸ್ಸನ್ನು ಉಳಿಸಿಕೊಂಡಿದೆ. ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸಲು ಬಿಜೆಪಿಯ ಜೊತೆಗೆ ಸೇರಿದ್ದೇವೆ’ ಎಂದು ಹೇಳಿದರು. ಇನ್ನೂ ಜನತಾ ಸಮಾವೇಶ ನಡೆಯುವ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲನೆ ನಡೆಸಿ, ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿದರು. ಈ ವೇಳೆ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚಹ್ವಾಣ, ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮುಖಂಡರಾದ ವೆಂಕಟರಾವ್ ನಾಡಗೌಡ, ಬಿ.ಡಿ.ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಸುನೀತಾ ಚವ್ಹಾಣ, ಹಣಮಂತ ಮಾವಿನಮರದ, ಅಪ್ಪರಾಬೇಗಂ ಛಪ್ಪರಬಂದ ಇದ್ದರು.

Tags:

error: Content is protected !!