ಬೆಳಗಾವಿಯಲ್ಲಿ ಇಂದು ಜೆಡಿಎಸ್ ಪಕ್ಷವು ಬೃಹತ್ ಸಮಾವೇಶ ಹಾಗೂ ಬೈಕ್ ರ್ಯಾಲಿ ನಡೆಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಣಕಹಳೆ ಊದಿದೆ. ಮಾಜಿ ಶಾಸಕ ಹಣಮಂತ ಆಲಕೋಡ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ, ಜಿಲ್ಲೆಯಾದ್ಯಂತ ಪಕ್ಷವನ್ನು ಗಟ್ಟಿಗೊಳಿಸಲು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಸಾಧನೆಗಳನ್ನು ಮನೆಮನೆಗೆ ತಲುಪಿಸಲು ನಿರ್ಧರಿಸಲಾಯಿತು.


ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಇಂದು ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ನಗರದ ಸಿಪಿಎಡ್ ಮೈದಾನದಿಂದ ಆರಂಭಗೊಂಡ ಭರ್ಜರಿ ಬೈಕ್ ರ್ಯಾಲಿಯು ಚನ್ನಮ್ಮ ವೃತ್ತದ ಮಾರ್ಗವಾಗಿ ಸಾಗಿ ಗಾಂಧಿ ಭವನದಲ್ಲಿ ಅಂತ್ಯಗೊಂಡಿತು. ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಶಾಸಕ ಹಣಮಂತ ಆಲಕೊಡ ಅವರು, “ಮುಂಬರುವ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಸಕ್ರಿಯವಾಗಿ ಕಣಕ್ಕಿಳಿಯಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.

ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ನೀಡಿದ್ದರು. ಪ್ರಸ್ತುತ ಅವರು ಕೇಂದ್ರ ಸಚಿವರಾಗಿಯೂ ರಾಜ್ಯದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಕೈಬಲಪಡಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ” ಎಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಕೃಷ್ಣಾ ರೆಡ್ಡಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರತಾಫರಾವ್ ಪಾಟೀಲ್, ಪಂಚಗೌಡರು, ದ್ಯಾಮನಗೌಡರು, ಪ್ರಕಾಶ್ ಸೋನವಾಲಕರ್, ಶಂಕರ ಮಾಡಲಗಿ, ಅಶೋಕ ಪಾಟೀಲ್ ವಿಠ್ಠಲ ಗಡ್ಡಿ, ಸಂಜೀವಗೋಳ ಶಿವರಾಜ್ ಪಾಟೀಲ್, ಸಿದ್ದನಗೌಡ ಪಾಟೀಲ್ ಸೇರಿದಂತೆ ಜಿಲ್ಲೆಯ ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಮಾಜಿ ಸಚಿವ ಹಣಮಂತ ಆಲಕೋಡ ಅವರು ಮಾತನಾಡಿ, ಹಾಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಮಹಿಳೆಯರು ಮತ್ತು ಮಕ್ಕಳ ಏಳ್ಗೆಗೆ ಜಾರಿಗೊಳಿಸಿದ ಯೋಜನೆಗಳನ್ನು ಉಲ್ಲೇಖಿಸಿ, ಮಗು ಹುಟ್ಟಿದಾಗಿನಿಂದ ಪಾಲನೆ ಪೋಷಣೆ, ವಿದ್ಯಾಭ್ಯಾಸ, ಮದುವೆಯ ವರೆಗೆ ಹೊತ್ತಿಕೊಂಡಿದ್ದ ಜವಾಬ್ದಾರಿಗಳನ್ನು ತಿಳಿಸಿದರು. ಮಹಾಮಾರಿ ಏಡ್ಸ್ ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ಅವರು ಕೈಗೊಂಡ ಕಾರ್ಯವನ್ನು ತಿಳಿಸಿದರು.

