BELAGAVI

‘ಉಡ್ತಾ ಪಂಜಾಬ್’ ಆಗ್ತಿದೆಯಾ ಬೆಳಗಾವಿ???!!!

Share

ಬೆಳಗಾವಿಯಲ್ಲಿ ಯುವಶಕ್ತಿಯನ್ನು ಡ್ರಗ್ಸ್ ಎಂಬ ಮಹಾಮಾರಿ ಹಂತಹಂತವಾಗಿ ನುಂಗುತ್ತಿದೆ. ಶಾಲಾ-ಕಾಲೇಜುಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ದಂಧೆಯನ್ನು ಬುಡಸಮೇತ ಕಿತ್ತೆಸೆಯಲು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಈಗ ಆಪರೇಷನ್ ಕ್ಲೀನ್ ಬೆಳಗಾವಿ ಆರಂಭಿಸಿದ್ದಾರೆ.
ಸಕ್ಕರೆಯ ನಗರಿ ಬೆಳಗಾವಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿಯಿಂದಾಗಿ ‘ಉಡ್ತಾ ಪಂಜಾಬ್’ ಹಾದಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಗರದಲ್ಲಿ ಗಾಂಜಾ ಮತ್ತು ಫನ್ನಿಯಂತಹ ಮಾದಕ ವಸ್ತುಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಸುಲಭವಾಗಿ ಲಭ್ಯವಾಗುತ್ತಿವೆ. ಕಳೆದ ಆರು ತಿಂಗಳಲ್ಲಿ ದಾಖಲಾಗಿರುವ 200 ಪ್ರಕರಣಗಳ ಪೈಕಿ 150 ಪ್ರಕರಣಗಳು ಕೇವಲ ಡ್ರಗ್ಸ್ ಸೇವನೆಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಹದಿಹರೆಯದ ಯುವಕರೇ ಹೆಚ್ಚಾಗಿರುವುದು ಬೆಚ್ಚಿಬೀಳಿಸುವಂತಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಸಪ್ಲೈ ಚೈನ್ ಕಟ್ ಮಾಡುವುದರ ಜೊತೆಗೆ, ಅದರ ಬೇಡಿಕೆಯನ್ನು ತಗ್ಗಿಸಲು ಪೊಲೀಸ್ ಇಲಾಖೆ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಈ ಮಾದಕ ಜಾಲದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು ಜಿಲ್ಲಾಡಳಿತಕ್ಕೆ ಮಹತ್ವದ ಪತ್ರ ಬರೆದಿದ್ದಾರೆ. ಇದರ ಅನ್ವಯ ಪ್ರತಿ ಸೆಮಿಸ್ಟರ್‌ನಲ್ಲಿ ಶೇ. 10ರಷ್ಟು ವಿದ್ಯಾರ್ಥಿಗಳಿಗೆ ಕಡ್ಡಾಯ ವೈದ್ಯಕೀಯ ತಪಾಸಣೆ ಮತ್ತು ರಕ್ತ ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾಲೇಜುಗಳಲ್ಲಿ ‘ಆಂಟಿ ಡ್ರಗ್ ಕಮಿಟಿ’ಗಳನ್ನು ರಚಿಸಲಾಗುತ್ತಿದೆ. ಪೋಷಕರು, ಪ್ರಾಚಾರ್ಯರು ಮತ್ತು ಪೊಲೀಸರನ್ನೊಳಗೊಂಡ ಈ ಸಮಿತಿಯು ವಿದ್ಯಾರ್ಥಿಗಳ ನಡವಳಿಕೆ ಮತ್ತು ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಿದ್ದು, ಬೆಳಗಾವಿಯನ್ನು ಡ್ರಗ್ಸ್ ಮುಕ್ತವಾಗಿಸಲು ಪಣ ತೊಟ್ಟಿದೆ.

Tags:

error: Content is protected !!