ವೈದ್ಯೋ ನಾರಾಯಣೋ ಹರಿ ಎನ್ನುವ ನಂಬಿಕೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೀಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕೊಳ್ಳಿ ಇಟ್ಟಿದ್ದಾರೆ. ರಾತ್ರಿ ವೇಳೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಗುವಿಗೆ ಕನಿಷ್ಠ ಪ್ರಥಮ ಚಿಕಿತ್ಸೆ ನೀಡಲು ಬಾಗಿಲು ತೆಗೆಯದ ಸಿಬ್ಬಂದಿಗಳ ವರ್ತನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಹಾವೇರಿಯಿಂದ ಕೆಲಸ ಅರಸಿ ಖಾನಾಪುರ ತಾಲೂಕಿನ ಬೀಡಿಗೆ ಬಂದಿದ್ದ ಬಡ ಕುಟುಂಬದ ಒಂದು ವರ್ಷದ ಮಗು ಬುಧವಾರ ರಾತ್ರಿ ಏಕಾಏಕಿ ಅಸ್ವಸ್ಥಗೊಂಡಿದೆ. ಆತಂಕಗೊಂಡ ಪೋಷಕರು ಬೀಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓಡಿ ಬಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಕನಿಷ್ಠ ಸೌಜನ್ಯವನ್ನೂ ತೋರದೆ, ಆಸ್ಪತ್ರೆಯ ಬೀಗವನ್ನೂ ತೆಗೆಯದೆ “ನಮಗೆ ಚಿಕಿತ್ಸೆ ನೀಡಲು ಆಗುವುದಿಲ್ಲ, ನಂದಗಡಕ್ಕೆ ಹೋಗಿ” ಎಂದು ಬೆದರಿಸಿ ಕಳುಹಿಸಿದ್ದಾರೆ. ತಡರಾತ್ರಿ ವಾಹನ ಸೌಲಭ್ಯವೂ ಇಲ್ಲದೆ, ಆಸ್ಪತ್ರೆಯ ಗೇಟ್ ಮುಂದೆ ಅಸಹಾಯಕ ಪೋಷಕರು ಮಗುವನ್ನು ಹಿಡಿದು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪತ್ರಕರ್ತ ನಾಗೇಶ ನಾಯ್ಕರ್ ಅವರು ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವಂತೆ ಎಷ್ಟೇ ವಿನಂತಿಸಿದರೂ ಸಿಬ್ಬಂದಿ ಕರಗಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತ ನಾಗೇಶ ನಾಯ್ಕರ್, ತಕ್ಷಣವೇ ತಮ್ಮದೇ ವಾಹನದಲ್ಲಿ ಮಗುವನ್ನು ನಂದಗಡದ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಮಗು ಚೇತರಿಸಿಕೊಂಡಿದ್ದು, ಪತ್ರಕರ್ತನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಇತ್ತ ಕರ್ತವ್ಯ ಲೋಪವೆಸಗಿದ ನರ್ಸ್ ವಿರುದ್ಧ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವಡಸಣ್ಣವರ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.
