ತೆರಿಗೆ ವಂಚನೆ ಮಾಡುವವರ ವಿರುದ್ಧ ಜಿಎಸ್‌ಟಿ ಗುಪ್ತಚರ ಇಲಾಖೆ ಸಮರ ಸಾರಿದೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 593 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಚೂನಾ ಹಾಕುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿಯ ಡಿಜಿಜಿಐ ಅಧಿಕಾರಿಗಳು ಭೇದಿಸಿದ್ದಾರೆ. ಈ ಹಗರಣದ ಕಿಂಗ್‌ಪಿನ್ ಈಗ ಜೈಲು ಪಾಲಾಗಿದ್ದಾನೆ.

ಬೆಳಗಾವಿ ವಲಯದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ (DGGI) ಅಧಿಕಾರಿಗಳು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, 593 ಕೋಟಿ ರೂಪಾಯಿಗಳ ನಕಲಿ ಇನ್‌ವಾಯ್ಸ್ ಹಗರಣವನ್ನು ಬಯಲಿಗೆಳೆದಿದ್ದಾರೆ. ಈ ದಂಧೆಯ ಮಾಸ್ಟರ್‌ಮೈಂಡ್, ಜಿಎಸ್‌ಟಿ ಸಲಹೆಗಾರ ಮೊಹಮ್ಮದ್ ಸೈಫುಲ್ಲಾನನ್ನು ಬಂಧಿಸಲಾಗಿದೆ. ಈತ ‘ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್’ ಹೆಸರಿನಲ್ಲಿ ಕಚೇರಿ ತೆರೆದು, ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆ ಮಾಡದೆಯೇ ಕೇವಲ ಕಾಗದದ ಮೇಲೆ ನಕಲಿ ಬಿಲ್‌ಗಳನ್ನು ಸೃಷ್ಟಿಸುತ್ತಿದ್ದನು. ಈ ಮೂಲಕ ಸುಮಾರು 235 ಕೋಟಿ ರೂಪಾಯಿಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯು ನೂರಾರು ನಕಲಿ ಜಿಎಸ್‌ಟಿ ನೋಂದಣಿಗಳನ್ನು ಮಾಡಿಕೊಂಡು, ಶೆಲ್ ಕಂಪನಿಗಳ ಹೆಸರಿನಲ್ಲಿ ಇ-ವೇ ಬಿಲ್‌ಗಳನ್ನು ಸೃಷ್ಟಿಸುತ್ತಿದ್ದನು. ಪ್ರತಿ ಬಿಲ್ ಮೇಲೆ ನಿರ್ದಿಷ್ಟ ಶೇಕಡಾವಾರು ಕಮಿಷನ್ ಪಡೆದು ಉದ್ಯಮಿಗಳಿಗೆ ತೆರಿಗೆ ವಂಚಿಸಲು ಸಹಾಯ ಮಾಡುತ್ತಿದ್ದ ಬಗ್ಗೆ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಫೆಬ್ರವರಿ 24 ರಂದು ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಈತನನ್ನು ಬೆಳಗಾವಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬೃಹತ್ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇದರ ಲಾಭ ಪಡೆದ ಫಲಾನುಭವಿಗಳು ಯಾರು ಎಂಬ ಬಗ್ಗೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
