ಬಣ್ಣಗಳ ಹಬ್ಬ ಹೋಳಿಗೆ ಬೆಳಗಾವಿ ನಗರ ಸಂಪೂರ್ಣ ಸಜ್ಜಾಗಿದೆ. ನಗರದ ಪ್ರಮುಖ ಮಾರುಕಟ್ಟೆ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ರಂಗು ರಂಗಿನ ಬಣ್ಣಗಳು, ಬಗೆಬಗೆಯ ಪಿಚಕಾರಿಗಳು ರಾರಾಜಿಸುತ್ತಿದ್ದು, ಜನಸಾಮಾನ್ಯರು ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ವ್ಯಾಪಾರಸ್ಥರ ಮುಖದಲ್ಲೂ ಈ ಬಾರಿ ಮಂದಹಾಸ ಮೂಡಿದೆ.


ಮಾರ್ಚ್ 4 ರಂದು ನಡೆಯಲಿರುವ ಬಣ್ಣಗಳ ಹಬ್ಬ ಹೋಳಿಗೆ ಬೆಳಗಾವಿ ನಗರದ ಮಾರುಕಟ್ಟೆಗಳು ಸರ್ವಸನ್ನದ್ಧವಾಗಿವೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಪಾಂಗುಳಗಲ್ಲಿ, ಗಣಪತ್ ಗಲ್ಲಿ ಹಾಗೂ ಮಾರುತಿ ಗಲ್ಲಿಗಳಲ್ಲಿ ವ್ಯಾಪಾರ ವಹಿವಾಟು ಅತ್ಯಂತ ಜೋರಾಗಿ ನಡೆಯುತ್ತಿದೆ. ಈ ಬಾರಿ ಮಾರುಕಟ್ಟೆಗೆ ಬರೋಬ್ಬರಿ 300ಕ್ಕೂ ಅಧಿಕ ವೈವಿಧ್ಯಮಯ ಉತ್ಪನ್ನಗಳು ಲಗ್ಗೆ ಇಟ್ಟಿದ್ದು, ಗ್ರಾಹಕರು ತಮ್ಮ ನೆಚ್ಚಿನ ಬಣ್ಣ ಮತ್ತು ಪರಿಕರಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ವ್ಯಾಪಾರಸ್ಥರಾದ ಚಿರಾಗ್ ಶಾಹ ಅವರು ಮಾಹಿತಿ ನೀಡಿದಂತೆ, ಈ ಬಾರಿ ಮಾರುಕಟ್ಟೆಯಲ್ಲಿ ಹೊಸತನದ ಅಲೆ ಎದ್ದಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಲ್ಲಾ ರೀತಿಯ ಸಾಮಗ್ರಿಗಳು ಲಭ್ಯವಿವೆ.

ಮಾರುಕಟ್ಟೆಯಲ್ಲಿ ಹನ್ನೆರಡು ವಿವಿಧ ಪ್ರಕಾರದ ಬಣ್ಣಗಳು ರಾರಾಜಿಸುತ್ತಿದ್ದು, ವಿಶೇಷವಾಗಿ ಚರ್ಮಕ್ಕೆ ಸುರಕ್ಷಿತವಾದ ಹರ್ಬಲ್ ಕಲರ್ಸ್ ಮತ್ತು ಸ್ಮೋಕ್ ಕಲರ್ಸ್‌ಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇದರೊಂದಿಗೆ ಸ್ಪ್ರೇ ಕಲರ್ಸ್, ವಾಟರ್ ಕಲರ್ಸ್ ಹಾಗೂ ಸಾಂಪ್ರದಾಯಿಕ ಖಡಿ ಪೌಡರ್ ಕೂಡ ಮಾರಾಟವಾಗುತ್ತಿವೆ. ಇನ್ನು ಪುಟಾಣಿ ಮಕ್ಕಳನ್ನು ಆಕರ್ಷಿಸಲು ಭೂತ್ ಮಾಸ್ಕ್, ಪ್ರಾಣಿಗಳ ಮುಖವಾಡಗಳು, ಬಣ್ಣಬಣ್ಣದ ಬಲೂನುಗಳು ಮತ್ತು ಅತ್ಯಾಧುನಿಕ ಎಲೆಕ್ಟ್ರಿಕಲ್ ಗನ್ ಹಾಗೂ ಪಿಚಕಾರಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ವ್ಯಾಪಾರಿ ಚಿರಾಗ್ ಶಾಹ ಅವರು ‘ಇನ್ ನ್ಯೂಸ್’ ಜೊತೆ ಮಾತನಾಡುತ್ತಾ, ಈ ಬಾರಿ ಮಾರುಕಟ್ಟೆಯಲ್ಲಿ ವ್ಯಾಪಾರವು ನಿರೀಕ್ಷೆಗೂ ಮೀರಿ ಉತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೋಳಿ ಹಬ್ಬಕ್ಕೆ ಕೇವಲ ಬಣ್ಣಗಳಷ್ಟೇ ಅಲ್ಲದೆ, ಸಡಗರದ ಮೆರವಣಿಗೆಗಾಗಿ ಬೇಕಾಗುವ ಡಫಲಿ ಹಾಗೂ ತಾಶಾದಂತಹ ಸಾಂಪ್ರದಾಯಿಕ ವಾದ್ಯಗಳಿಗೂ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಕೇವಲ 40 ರೂಪಾಯಿಯಿಂದ ಆರಂಭಗೊಂಡು 300 ರೂಪಾಯಿವರೆಗಿನ ಆಕರ್ಷಕ ದರಗಳಲ್ಲಿ ಈ ಎಲ್ಲಾ ಉತ್ಪನ್ನಗಳು ದೊರೆಯುತ್ತಿದ್ದು, ಸಾಮಾನ್ಯ ಜನರಿಂದ ಹಿಡಿದು ಎಲ್ಲ ವರ್ಗದ ಜನರಿಗೂ ಎಟುಕುವಂತಿದೆ.

ಒಟ್ಟಿನಲ್ಲಿ, ಬೆಳಗಾವಿಯ ಮಾರುಕಟ್ಟೆಯು ರಂಗುರಂಗಿನ ಬಣ್ಣಗಳ ಲೋಕವಾಗಿ ಬದಲಾಗಿದ್ದು, ಈ ಬಾರಿಯ ಹೋಳಿ ಹಬ್ಬವು ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮತ್ತು ಉತ್ಸಾಹವನ್ನು ಮೂಡಿಸಿದೆ.
