BELAGAVI

ಬಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಭವ್ಯ ‘ದೀಪ ಬೆಳಗಿಸುವ’ ಸಮಾರಂಭ: 100% ಫಲಿತಾಂಶ ತಂದ ಸಾಧಕ ವಿದ್ಯಾರ್ಥಿಗಳಿಗೆ ಡಾ. ತನ್ವೀರ್ ಅಹ್ಮದ್ ಕಿವಿಮಾತು!

Share

ಇಂದು ನೀವು ಬೆಳಗಿದ ಈ ದೀಪವು ಕೇವಲ ಬೆಳಕಲ್ಲ, ಇದು ರೋಗಿಗಳ ಪಾಲಿನ ಭರವಸೆಯ ಜ್ಯೋತಿಯಾಗಿದ್ದು, ನಿಮ್ಮ ಪವಿತ್ರ ವೃತ್ತಿ ಜೀವನದ ನಿಸ್ವಾರ್ಥ ಸೇವೆಯ ಸಂಕೇತವಾಗಿದೆ. ಬಿಮ್ಸ್ ಕಾಲೇಜಿನ ನೂರಕ್ಕೆ ನೂರರಷ್ಟು ಫಲಿತಾಂಶದ ಸಾಧನೆಯು ಹೆಮ್ಮೆಯ ವಿಷಯವಾಗಿದ್ದು, ಶೈಕ್ಷಣಿಕ ಯಶಸ್ಸಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೆಳಗಿ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ. ತನ್ವೀರ್ ಅಹ್ಮದ್ ನಾಯ್ಕೋಡಿ ಅವರು ಹೇಳಿದರು.

ಬೆಳಗಾವಿಯ ಬಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಇಂದು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ. ತನ್ವೀರ್ ಅಹ್ಮದ್ ನಾಯ್ಕೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನರ್ಸಿಂಗ್ ವೃತ್ತಿಯು ಅತ್ಯಂತ ಪವಿತ್ರವಾದುದು, ವಿದ್ಯಾರ್ಥಿಗಳು ಶಿಸ್ತು ಮತ್ತು ಸೇವಾವೈಖರಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂದು ಬೆಳಗಿದ್ದು ಕೇವಲ ದೀಪವಲ್ಲ. ಇದು ನಿಮ್ಮ ಜೀವನವನ್ನು ಬೆಳಗಿಸುವ ಪ್ರಕಾಶವಾಗಿದೆ. ಹಲವಾರು ಜವಾಬ್ದಾರಿಗಳೊಂದಿಗೆ ನಿಸ್ವಾರ್ಥ ಭಾವನೆಯೊಂದಿಗೆ ವೃತ್ತಿ ಜೀವನಕ್ಕಿಂದು ನೀವು ಪಾದಾರ್ಪಣೆ ಮಾಡಿದ್ದೀರಿ. ಎಲ್ಲವನ್ನು ಕಲಿತು ಕಾಲಕ್ಕೆ ತಕ್ಕಂತೆ ಬದಲಾಗಿ ಏಳ್ಗೆಯನ್ನು ಹೊಂದಬೇಕು. ನರ್ಸಿಂಗ್ ವೃತ್ತಿಗೆ ತನ್ನದೇಯಾದ ಸ್ಥಾನವಿದ್ದು, ಭಾರತೀಯ ನರ್ಸಿಂಗ್ ಸಿಬ್ಬಂದಿಗಳಿಗೆ ಜಗತ್ತಿನಲ್ಲಿ ಅತಿಯಾದ ಬೇಡಿಕೆಯಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ನರ್ಸಿಂಗ್ ಸಿಬ್ಬಂದಿಗಳ ನೇಮಕಾತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕಿದೆ ಎಂದರು.

ಇದಕ್ಕೂ ಮುನ್ನ ಕಾಲೇಜಿನ ಪ್ರಾಚಾರ್ಯ ಡಾ. ನಾಮದೇವ ಮಾಳಗಿ ಅವರು ಪ್ರಸಕ್ತ ವರ್ಷದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಶೇಕಡಾ 100 ರಷ್ಟು ಫಲಿತಾಂಶವನ್ನು ತಂದಿದ್ದು, ಶೇಕಡಾ 99 ರಷ್ಟು ವಿದ್ಯಾರ್ಥಿಗಳು ಡಿಸಟಿಂಕ್ಶನ್ ಪಡೆದಿದ್ದಾರೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಿಮ್ಸ್ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.


ಸಮಾರಂಭದಲ್ಲಿ ಬಿಮ್ಸ್‌ನ ಪ್ರಮುಖ ಅಧಿಕಾರಿಗಳಾದ ರೇಷ್ಮಾ ತಾಳಿಕೋಟಿ, ಶಿಲ್ಪಾ ವಾಲಿ, ಹಾಗೂ ಪ್ರಾಚಾರ್ಯರಾದ ಡಾ. ಉಮೇಶ್ ಕುಲಕರ್ಣಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಎಸ್. ಗಾಣಗಿ, ಆರ್.ಎಂ.ಒ ಡಾ. ಸರೋಜಾ ತಿಗಡಿ, ನರ್ಸಿಂಗ್ ಅಧೀಕ್ಷಕಿ ಕಾಂಚನಮಾಲಾ ಸೂರ್ಯವಂಶಿ ಹಾಗೂ ನರ್ಸಿಂಗ್ ಶಾಲೆಯ ಪ್ರಾಚಾರ್ಯ ಡಾ. ಪ್ರಕಾಶ್ ಡಿ. ಕೊಡಲಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಇಡೀ ಬೋಧಕ ವರ್ಗ ಪಾಲ್ಗೊಂಡಿತ್ತು.

Tags:

error: Content is protected !!