ಭಾರತೀಯ ಬೌದ್ಧ ಮಹಾಸಭಾ ಮತ್ತು ಶತಮಾನೋತ್ಸವ ಸಮಿತಿ ವತಿಯಿಂದ ಮಹಾಮಾನವ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಪ್ಪಾಣಿ ಭೇಟಿಯ ಶತಮಾನೋತ್ಸವದ ನೆನಪಿಗಾಗಿ, ಮಾರ್ಚ್ 1ರಂದು ನಿಪ್ಪಾಣಿಯಲ್ಲಿ ಬೃಹತ್ ‘ಧಮ್ಮ ಪರಿಷತ್’ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಪಿ. ಗಡಿನಾಯಕ ತಿಳಿಸಿದರು.

ಬೆಳಗಾವಿಯ ಬೌದ್ಧ ವಿಹಾರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಈ ಐತಿಹಾಸಿಕ ಧಮ್ಮ ಪರಿಷತ್ತಿಗೆ ಸುಪ್ರಸಿದ್ಧ ಲೇಖಕ ಮತ್ತು ವಾಗ್ಮಿ ಜಗದೀಶ್ ಮೋಹೋಳ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಉತ್ತರ ಕರ್ನಾಟಕ ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಮನೋಹರ್ ಮೋರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನಿಪ್ಪಾಣಿ ನಗರವು ಅಂಬೇಡ್ಕರಿ ಚಳವಳಿಯ ಪ್ರಮುಖ ಕೇಂದ್ರವಾಗಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಲ್ಲಿಗೆ ಎಂಟು ಬಾರಿ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದರು. ಅಂಬೇಡ್ಕರ್ ಕುಟುಂಬದ ಮೂರು ತಲೆಮಾರುಗಳಾದ ಯಶವಂತರಾವ್ ಅಂಬೇಡ್ಕರ್, ಮೀರಾತಾಯಿ ಅಂಬೇಡ್ಕರ್ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರು ಇಲ್ಲಿ ಧಮ್ಮ ಪ್ರಚಾರ ಮಾಡಿದ್ದರಿಂದ ಈ ನೆಲಕ್ಕೆ ‘ಧಮ್ಮಭೂಮಿ’ ಎಂಬ ಹೆಗ್ಗಳಿಕೆಯಿದೆ. ಇಂತಹ ಐತಿಹಾಸಿಕ ನಗರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿಯ ಅಧ್ಯಕ್ಷ ಸುಧಾಕರ್ ಮಾನೆ ಮನವಿ ಮಾಡಿದರು.
ಮಾಧ್ಯಮಗೋಷ್ಟಿಯಲ್ಲಿ ಅಜಿತ್ ಕಾಂಬಳೆ, ಉದಯ್ ವಂಟೆ, ಜನಾರ್ದನ್ ಮೋಹಿತೆ, ಸುಶೀಲ್ ಕಾಂಬಳೆ, ದಿಲೀಪ್ ಕಾಂಬಳೆ, ರಾಜೇಂದ್ರ ಕಾಂಬಳೆ, ದೀಪಕ್ ಮೆತ್ರಿ, ಕಲ್ಲಪ್ಪ ಚೌಗಲೆ ಹಾಗೂ ಶೇಖರ್ ಶಿಂಗೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
