BELAGAVI

ಎನ್‌ಸಿಸಿ ಕೆಡೆಟ್‌ಗಳಿಗೆ ಸೈನ್ಯದಲ್ಲಿ ಸುವರ್ಣಾವಕಾಶ; ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ರಾಷ್ಟ್ರೀಯ ಸಾಧಕರಿಗೆ ಸನ್ಮಾನ

Share

ರಾಷ್ಟ್ರ ನಿರ್ಮಾಣದಲ್ಲಿ ಎನ್‌ಸಿಸಿ ಕೆಡೆಟ್‌ಗಳ ಪಾತ್ರ ಅನನ್ಯವಾಗಿದ್ದು, ಕಠಿಣ ಪರಿಶ್ರಮ ಪಟ್ಟರೆ ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ವಿಪುಲ ಅವಕಾಶಗಳಿವೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ್ ದಾಗರ ಕಿವಿಮಾತು ಹೇಳಿದ್ದಾರೆ.

ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಾಧಕರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (RDC) ಪಾಲ್ಗೊಂಡು ಸಾಧನೆ ಮಾಡಿದ ಧೀರಜ್ ಭಾವಿಮನೆ ಹಾಗೂ ರಾಷ್ಟ್ರೀಯ ಸೈನಿಕ ಶಿಬಿರದಲ್ಲಿ ಮಿಂಚಿದ ಓಂಕಾರ್ ಲೋಗಾವಿ ಅವರನ್ನು ಕಾಲೇಜಿನಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಲ್ ಸುನೀಲ್ ದಾಗರ, “ಬದುಕಿನಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳಿ. ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ ಪಡೆದವರಿಗೆ ಸೇನೆಯಲ್ಲಿ ವಿಶೇಷ ಆದ್ಯತೆ ಇದೆ. ತಂದೆ-ತಾಯಿಯ ಕನಸು ನನಸು ಮಾಡುವುದೇ ನಿಜವಾದ ಸಾಧನೆ” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಚ್.ಎಸ್. ಮೇಲಿನಮನಿ ಮಾತನಾಡಿ, ಕಾಲೇಜು ಕ್ರೀಡೆ ಹಾಗೂ ಎನ್‌ಸಿಸಿಗೆ ಪೂರಕ ಸೌಲಭ್ಯಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಎನ್‌ಸಿಸಿ ಅಧಿಕಾರಿ ಮೇಜರ್ ಮಹೇಶ ಗುರನಗೌಡರ ಅವರು ಮಾತನಾಡಿ, ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರ ಮಾರ್ಗದರ್ಶನದಿಂದ ಲಿಂಗರಾಜ ಕಾಲೇಜಿನ ಕೆಡೆಟ್‌ಗಳು ಇಂದು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ಸಂತೋಷ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!