Belagavi

ಎಸ್ ಎಸ್ ಎಲ್ ಸಿ, ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಲು ಮಹತ್ವದ ಸಲಹೆ ನೀಡಿದ ಕಿರಣ ಗಣಾಚಾರಿ

Share

 

ಬೆಳಗಾವಿ: ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಜೀವನದ ಅತ್ಯಂತ ಮಹತ್ವದ ಘಟ್ಟಗಳು ಎನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಶ್ರೇಷ್ಠ ಮಟ್ಟದ ಓದಿನಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಉನ್ನತ ಹುದ್ದೆಗೆ ಹೋಗುವ ಕನಸು ಕಾಣುವಂತೆ ಕಿರಣ ಗಣಾಚಾರಿ ಕರೆ ನೀಡಿದರು.

ಕೆಎಲ್ ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಜಿಎ ಪ್ರೌಢಶಾಲೆ ಬಹಳ ಇತಿಹಾಸ ಹೊಂದಿರುವ ಶಾಲೆಯಾಗಿದೆ. ಇಲ್ಲಿನ ಶಿಕ್ಷಕರು ತಮಗೆ ನಿರ್ದಿಷ್ಟ ಪಡಿಸಿದ ಪಾಠಗಳನ್ನು ಮಾತ್ರ ಮಾಡದೆ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾದ ಜೀವನ ವಿದ್ಯೆಯನ್ನು ಕಲಿಸುವ ಪಾಠವನ್ನು ಮಾಡಿರುವುದು ಅತ್ಯಂತ ಶ್ಲಾಘನೀಯ. ಈ ದಿಶೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ಈ ಶಾಲೆಯ ಶಿಕ್ಷಕರು ಕಾಳಜಿ ವಹಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಪ್ರತಿ ದಿನ ರಾತ್ರಿ 8 ಗಂಟೆಗೆ ಮತ್ತು ಬೆಳಗಿನ ಜಾವ 4 ಗಂಟೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ವಿಚಾರಣೆ ನಡೆಸಿ ಅವರನ್ನು ಪ್ರೇರೇಪಿಸುತ್ತಿದ್ದಾರೆ. ಸ್ವಂತ ಮಕ್ಕಳನ್ನು ಸಹ ಈ ರೀತಿ ನೋಡದೆ ತಾವು ಕಲಿಸಿದ ವಿದ್ಯಾರ್ಥಿಗಳನ್ನು ತಿದ್ದುವಲ್ಲಿ ಶಿಕ್ಷಕರು ಮಾಡುತ್ತಿರುವ ಕೆಲಸ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ ಎಂದು ಹೇಳಿದರು.

ತಮ್ಮ ಶಿಷ್ಯಂದಿರು ಉನ್ನತ ಅಂಕ ಗಳಿಸುವಲ್ಲಿ ಅವರು ಸಕಲವನ್ನು ತ್ಯಾಗ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಗುರುಗಳ ಅತ್ಯಂತ ಪ್ರೀತಿಯ ವಿದ್ಯಾರ್ಥಿಗಳಾಗಿರುವ ನೀವೆಲ್ಲರೂ ಪ್ರಯತ್ನಶೀಲರಾಗಿ ಗುರುಗಳ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ಓದಿ ಎಂದು ಅವರು ಹೇಳಿದರು.

ನೀವು ಶ್ರೇಷ್ಠ ರೀತಿಯಲ್ಲಿ ಈಗ ಅಭ್ಯಾಸ ಮಾಡುತ್ತಿದ್ದೀರಿ. ಆದರೂ ಸಹ ನೀವೆಲ್ಲರೂ ಈಗ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾನು ಗುರುಗಳು ಹೇಳಿದ ಪಾಠವನ್ನು ಸರಿಯಾಗಿ ಓದುತ್ತಿದ್ದೇನೆಯೇ ಎನ್ನುವುದರ ಬಗ್ಗೆ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಿ. ಅವರು ಹೇಳಿರುವ ಎಲ್ಲಾ ಪಾಠಗಳನ್ನು ಪುನರ್ ಮನನ ಮಾಡಿಕೊಳ್ಳಿ ಎಂದು ಅವರು ಮಾರ್ಗದರ್ಶನ ಮಾಡಿದರು.

 

ಮುಂದಿನ ಜೀವನದಲ್ಲಿ ನೀವೆಲ್ಲರೂ ಶ್ರೇಷ್ಠ ನಾಗರಿಕರಾಗಿ ಹೊರಹೊಮ್ಮಬೇಕು. ಯಾವುದೇ ಕಾರಣಕ್ಕೂ ಕುಡಿತ ಮುಂತಾದ ದುಶ್ಚಟಗಳ ಹಿಂದೆ ಸಾಗಬೇಡಿ. ಒಮ್ಮೆ ಕುಡಿತದ ಹಿಂದೆ ಹೋದರೆ ಸಾವಿನ ನಂತರವೂ ಅದರ ಕಳಂಕ ಎನ್ನುವುದು ನಿಮ್ಮನ್ನು ಬಿಟ್ಟು ಹೋಗಲಾರದು, ಭವಿಷ್ಯದಲ್ಲಿ ನೀವು ಮದ್ಯಪಾನ ಮುಂತಾದ ದುಷ್ಚಟಗಳಿಂದ ಸದಾ ದೂರ ಇರಲು ಪ್ರಯತ್ನಿಸಿ. ಜೀವನದಲ್ಲಿ ಒಮ್ಮೆ ಅಂತಹ ದುಶ್ಚಟಗಳ ಹಿಂದೆ ಹೋದರೆ ಅದರಿಂದ ಹೊರಬರಲು ಅಸಾಧ್ಯ ಎನ್ನುವುದು ನಿಮ್ಮೆಲ್ಲರಿಗೂ ನೆನಪಿರಲಿ. ಯಾವುದೇ ಕಾರಣಕ್ಕೂ ಸಂಸಾರಕ್ಕೆ ಎರವಾಗುವ ಭೀಕರ ಖಾಯಿಲೆಗಳಿಗೆ ಎಂದಿಗೂ ತಮ್ಮನ್ನು ಬರಮಾಡಿಕೊಳ್ಳದಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ ಆತ್ಮವಿಶ್ವಾಸ ಮತ್ತು ಸಮಯ ಪ್ರಜ್ಞೆಯನ್ನು ಬೆಳೆಸಿಕೊಂಡು ಜೀವನದಲ್ಲಿ ಗುರಿ ತಲುಪಬೇಕು ಎಂದು ವಿದ್ಯಾರ್ಥಿಗಳಿಗೆ ನೀಡಿದರು.

 

ಪ್ರಾಚಾರ್ಯ ಡಿ.ಎಸ್.ಪವಾರ, ಶಾಲಾ ಪ್ರಧಾನಿಗಳಾದ ಶ್ರೇಯಾ ಕುಂದರನಾಡ, ಹುಸೇನ ಪಠಾಣ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀನಿಧಿ ಬೊಮ್ಮನ್ನವರ ಪ್ರಾರ್ಥಿಸಿದರು. ಎ.ಆರ್.ಪಾಟೀಲ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಆಡಿದರು. ಎಸ್.ಜೆ.ಏಳುಕೋಟಿ ಪರಿಚಯಿಸಿದರು. ಒಕ್ಕೂಟದ ಅಧ್ಯಕ್ಷೆ ಎಸ್.ಬಿ.ಕೋರೆ ವರದಿ ವಾಚಿಸಿದರು. ಶಿಕ್ಷಕ ಸಿ.ಎಂ.ಪಾಗಾದ. ವಿದ್ಯಾರ್ಥಿಗಳಾದ ಕ್ರಿಶಾ ಬಾಂಡಗಿ, ಚಂದ್ರಿಕಾ ಹುಕ್ಕೇರಿ, ಸ್ಮಿತಾ ಅಗಸಗಿ, ಅಭಿಷೇಕ ಮಾಲಗಿತ್ತಿ ಅನಿಸಿಕೆ ವ್ಯಕ್ತಪಡಿಸಿದರು. ಎಚ್.ಜಿ.ವೀರಗಂಟಿ, ಎ.ಜಿ.ಬಾಯನ್ನವರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಿ.ಆಯ್.ಅಂಗಡಿ ಮತ್ತು ಎಸ್.ಎಸ್.ಹಲವಾಯಿ ನಿರೂಪಿಸಿದರು. ಎಂ.ಎಸ್.ಮಗದುಮ್ಮ ವಂದಿಸಿದರು.

Tags:

error: Content is protected !!