ಪರಂಪರಾ ವುಮನ್ ಪ್ಲಾಟ್ ಫಾರ್ಮ್ ವತಿಯಿಂದ ಫೆ.28 ರಂದು ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಮಹಿಳೆಯರಿಗಾಗಿ ಒಂದು ದಿನದ ಡಿಜಿಟಲ್ ಮ್ಯಾನೇಜಮೆಂಟ್ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರೀಯಾ ಪುರಾಣಿಕ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉದ್ಯಮ ಕ್ಷೇತ್ರ ಸಂಪೂರ್ಣ ಆನ್‌ಲೈನ್‌ನತ್ತ ಮುಖ ಮಾಡಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳಾ ಉದ್ಯಮಿಗಳು ಮಾರುಕಟ್ಟೆ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಫೆಬ್ರವರಿ 28 ರಂದು ನಗರದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಒಂದು ದಿನದ ‘ಡಿಜಿಟಲ್ ಮ್ಯಾನೇಜ್‌ಮೆಂಟ್’ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಹಿಳೆಯರು ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನು ಹಾಗೂ ಇತರ ಉತ್ಪನ್ನಗಳನ್ನು ಆಧುನಿಕ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದನ್ನು ಮನಗಂಡು ನಾವು 2019ರಲ್ಲಿ ‘ಪರಂಪರಾ ವುಮನ್ ಪ್ಲಾಟ್‌ಫಾರ್ಮ್’ ಸ್ಥಾಪಿಸಿದೆವು. ಸದ್ಯ ಈ ವೇದಿಕೆಯಲ್ಲಿ 60ಕ್ಕೂ ಹೆಚ್ಚು ಸಕ್ರಿಯ ಸದಸ್ಯರಿದ್ದು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದರು.
ಈ ತರಬೇತಿ ಕಾರ್ಯಕ್ರಮವು ಸಂಪೂರ್ಣವಾಗಿ ಉಚಿತವಾಗಿದ್ದು, ಸುಮಾರು 100 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಉತ್ಪನ್ನಗಳ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಲತಾ ಹೂಲಿ, ಶೌರಿಕಾ ಗರಗಟ್ಟಿ, ಭಾರತಿ ಒಡವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
