Accident

ಬಾಗಲಕೋಟೆಯಲ್ಲಿ ಕಂದಕಕ್ಕೆ ಉರುಳಿದ ಟ್ರಾಕ್ಟರ್, ಎರಡು ವರ್ಷದ ಮಗು ಸೇರಿ ನಾಲ್ವರು ಕಬ್ಬು ಕಾರ್ಮಿಕರ ದುರ್ಮರಣ!!!

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹೊರವಲಯದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ ಪರಿಣಾಮ, ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಮಖಂಡಿ-ಮುಧೋಳ ರಸ್ತೆಯಲ್ಲಿ ಈ ಘೋರ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯ ಗುಪ್ತವಾಡ ಗ್ರಾಮದ ಕಬ್ಬು ಕಟಾವು ಕಾರ್ಮಿಕರು ಎಂದು ಗುರುತಿಸಲಾಗಿದೆ. ಮುಧೋಳ ಕಡೆಯಿಂದ ಜಮಖಂಡಿಗೆ ತೆರಳುತ್ತಿದ್ದ ಟ್ರಾಕ್ಟರ್‌ನಲ್ಲಿ ಸುಮಾರು 20 ಮಂದಿ ಕಾರ್ಮಿಕರಿದ್ದರು. ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ದಿಢೀರ್ ಕಂದಕಕ್ಕೆ ಉರುಳಿದ್ದರಿಂದ 23 ವರ್ಷದ ಮನುಷ್, 27 ವರ್ಷದ ಲಕ್ಷ್ಮಿ, 28 ವರ್ಷದ ರೇಖಾ ಹಾಗೂ ಕೇವಲ 2 ವರ್ಷದ ಮಗು ಹಲಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಟ್ರಾಕ್ಟರ್‌ನಲ್ಲಿದ್ದ ಇತರ 8 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಮಖಂಡಿ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕಕ್ಕೆ ಉರುಳಿದ ಟ್ರಾಕ್ಟರ್ ಅನ್ನು ಕ್ರೇನ್ ಮೂಲಕ ಮೇಲೆತ್ತುವ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಬ್ಬು ಕಟಾವು ಮುಗಿಸಿ ಅರೆಹೊಟ್ಟೆ ಪಾಡಿಗಾಗಿ ಬಂದಿದ್ದ ಕಾರ್ಮಿಕರು ಹೀಗೆ ಅರ್ಧ ದಾರಿಯಲ್ಲೇ ಮಸಣ ಸೇರಿರುವುದು ತೀವ್ರ ವಿಷಾದನೀಯವಾಗಿದೆ.

Tags:

error: Content is protected !!