ಸೋಲಾರ್ ಪ್ಲಾಂಟ್ ಸ್ಥಾಪನೆಯ ಹೆಸರಿನಲ್ಲಿ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಲಕ್ಷಾಂತರ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಈ ಗಂಭೀರ ಪರಿಸರ ನಾಶದ ವಿರುದ್ಧ ಎಂ.ಎಲ್.ಸಿ ನಾಗರಾಜ್ ಯಾದವ್ ಅವರು ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿ ಗುಡ್ಡ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ನೆಪದಲ್ಲಿ ಬೃಹತ್ ಪ್ರಮಾಣದ ಅರಣ್ಯ ನಾಶ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ಸುಮಾರು 50 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಲಕ್ಷಾಂತರ ಗಿಡಮರಗಳನ್ನು ಅಕ್ರಮವಾಗಿ ನೆಲಸಮ ಮಾಡಲಾಗಿದೆ. ಇದರಲ್ಲಿ ಬೆಲೆಬಾಳುವ ಕಾರಿ ಕೌರಿ ಶ್ರೀಗಂಧದ ಮರಗಳೂ ಸೇರಿವೆ ಎಂಬುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಈ ಅಕ್ರಮ ಕೃತ್ಯದಿಂದಾಗಿ ವನ್ಯಜೀವಿಗಳ ಆಶ್ರಯತಾಣಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗಿದೆ. ಈ ವಿಚಾರವನ್ನು ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸಿದ ನಾಗರಾಜ್ ಯಾದವ್, ಇಷ್ಟು ದೊಡ್ಡ ಮಟ್ಟದ ಮಾರಣಹೋಮ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದೇಕೆ ಎಂದು ಪ್ರಶ್ನಿಸಿದರು. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
