ಬೆಳಗಾವಿಯ ಸಮರ್ಥನಗರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಲಾಗುತ್ತಿದ್ದ ಅಕ್ರಮ ಲೇಔಟ್ ವಿರುದ್ಧ ಕೊನೆಗೂ ಅಧಿಕಾರಿಗಳು ಗುಡುಗಿದ್ದಾರೆ. ಸ್ಥಳೀಯ ನಿವಾಸಿಗಳ ಸುದೀರ್ಘ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು, ಬುಡಾ ಅಧಿಕಾರಿಗಳು ಇಂದು ಜೆಸಿಬಿ ಹಿಡಿದು ಅಖಾಡಕ್ಕಿಳಿದಿದ್ದಾರೆ.

ಬೆಳಗಾವಿಯ ಸಮರ್ಥನಗರದ ಸರ್ವೆ ನಂಬರ್ 403/1 ಮತ್ತು 403/2ರಲ್ಲಿ ಯಾವುದೇ ಅನುಮತಿ ಇಲ್ಲದೆ ತಲೆಯೆತ್ತುತ್ತಿದ್ದ ಅಕ್ರಮ ಲೇಔಟ್ ವಿರುದ್ಧ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಟೀಚರ್ಸ್ ಕಾಲೋನಿ ಮತ್ತು ಬಾಡಿವಾಲೆ ಕಾಲೋನಿಯ ನಿವಾಸಿಗಳು ಭೂಮಾಫಿಯಾದ ಈ ದೌರ್ಜನ್ಯದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಇಲ್ಲಿನ ನೂರಾರು ಮರಗಳನ್ನು ಮನಬಂದಂತೆ ಕಡಿದು ಹಾಕಲಾಗಿದ್ದು, ರಾಜಕಾಲುವೆಯಂತಹ ಚರಂಡಿ ಜಾಗವನ್ನು ಒತ್ತುವರಿ ಮಾಡಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ. ಈ ಅಕ್ರಮದಿಂದಾಗಿ ಮುಂಬರುವ ಮಳೆಗಾಲದಲ್ಲಿ ಮಳೆನೀರು ಮತ್ತು ಕೊಳಚೆ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದ್ದು, ಜನಸಾಮಾನ್ಯರ ನೆಮ್ಮದಿ ಕೆಡಿಸಿತ್ತು. ಕಳೆದ ಏಪ್ರಿಲ್ನಲ್ಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ಅಧಿಕಾರಿಗಳ ಮೌನದ ವಿರುದ್ಧ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಇಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಎಂಜಿನಿಯರ್ಗಳ ತಂಡ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಒಳಚರಂಡಿ ಕಾಮಗಾರಿಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿರುವ ಅಧಿಕಾರಿಗಳು, ಲೇಔಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
