ಖಾನಾಪುರ-ಅನಮೋಡ್ ರಸ್ತೆಯ ಪಾಲಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ತಂದೆ-ಮಗನ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಅತಿವೇಗವಾಗಿ ಬಂದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, 13 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ಆತನ ತಂದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಗೋವಾದಿಂದ ಖಾನಾಪುರದ ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಟ್ರಕ್ (KA-22/C-9082), ಪಾಲಿ ಗ್ರಾಮದ ಅರಣ್ಯ ಚೆಕ್‌ಪೋಸ್ಟ್ ಬಳಿ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ನ ಹಿಂಬದಿ ಕುಳಿತಿದ್ದ ಸಮರ್ಥ್ ಸಂಜಯ ದೇಸಾಯಿ (13) ಎಂಬ ಬಾಲಕ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಆತನ ತಂದೆ ಸಂಜಯ ವಿಠೋಬಾ ದೇಸಾಯಿ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕ ಮತ್ತು ಗಾಯಾಳು ತಂದೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ವರ್ಲೇವಾಡಿ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕ ಜಾಫರ್‌ಸಾಬ್ ಮರ್ದಾನಸಾಬ್ ಬಂಕಾಪೂರ (52) ಎಂಬಾತನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಧಾವಿಸಿದ ಖಾನಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಜಯ ದೇಸಾಯಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

