BELAGAVI

ನಕಲಿ ST ಪ್ರಮಾಣ ಪತ್ರ ಹಾವಳಿ: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ವಾಲ್ಮೀಕಿ ಯುವ ಘಟಕ ಮುತ್ತಿಗೆ, ಅಧಿಕಾರಿಗಳಿಗೆ ಉಗ್ರ ಹೋರಾಟದ ಎಚ್ಚರಿಕೆ!

Share

ಬೆಳಗಾವಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ವಿರುದ್ಧ ವಾಲ್ಮೀಕಿ ಸಮುದಾಯ ಸಮರ ಸಾರಿದ್ದು, ಹೈಕೋರ್ಟ್ ಆದೇಶವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಪರಿಶಿಷ್ಟ ಪಂಗಡದ (ST) ಹೆಸರಿನಲ್ಲಿ ನಡೆಯುತ್ತಿರುವ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಗರಣವನ್ನು ಖಂಡಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕವು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಪ್ರವರ್ಗ-1ಕ್ಕೆ ಸೇರಿದ ಅಂಬಿಗ, ಬೆಸ್ತ, ಸುಣಗಾರ ಮೊದಲಾದ ಸಮುದಾಯದವರು ಕಾನೂನು ಬಾಹಿರವಾಗಿ ‘ತಳವಾರ’ ಹೆಸರಿನಡಿ ST ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸಂಘಟನೆ ಗಂಭೀರವಾಗಿ ಆರೋಪಿಸಿದೆ. ಈ ಕುರಿತು ಉಚ್ಚ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 11 ಬಾರಿ ನೆನಪೋಲೆಗಳನ್ನು ನೀಡಿದ್ದರೂ, ಬೆಳಗಾವಿ ಜಿಲ್ಲಾಡಳಿತ ಹಾಗೂ ತಹಶೀಲ್ದಾರರು ಯಾವುದೇ ಕ್ರಮ ಕೈಗೊಳ್ಳದಿರುವುದು ಸಮುದಾಯಕ್ಕೆ ಬಗೆದ ದ್ರೋಹ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

1990ರ ಕಾಯ್ದೆ 4F ಅಡಿ ನಕಲಿ ಪ್ರಮಾಣ ಪತ್ರಗಳನ್ನು ರದ್ದುಪಡಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದ್ದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸುಳ್ಳು ದಾಖಲೆ ನೀಡಿ ನೌಕರಿ ಪಡೆದವರನ್ನು ವಜಾಗೊಳಿಸಬೇಕು ಮತ್ತು ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಒಂದು ವೇಳೆ ಕೂಡಲೇ ನ್ಯಾಯ ಸಿಗದಿದ್ದಲ್ಲಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದರ ಜೊತೆಗೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾದ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಲ್ಲೇಶ್ ಮುಳಗಶಿ, ಲಕ್ಷ್ಮಣ ಬಾಗಡಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!