ಬಾಗಲಕೋಟೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸಂಧಾನ ಸಭೆ ಸಂಪೂರ್ಣ ವಿಫಲವಾಗಿದೆ. ಮುಸ್ಲಿಂ ಮುಖಂಡರ ಗೈರುಹಾಜರಿಯಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದು, ಇಂದು ಸಂಜೆಯೊಳಗೆ ಎಲ್ಲಾ ಆರೋಪಿಗಳ ಬಂಧನಕ್ಕೆ ಡೆಡ್ಲೈನ್ ನೀಡಿವೆ.

ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ನಿನ್ನೆ ಸಂಜೆ ಕರೆಯಲಾಗಿದ್ದ ಶಾಂತಿ ಸಭೆಯು ಯಾವುದೇ ತಾರ್ಕಿಕ ಅಂತ್ಯವಿಲ್ಲದೆ ಮುಕ್ತಾಯಗೊಂಡಿದೆ. ಜಿಲ್ಲಾಡಳಿತದ ಕರೆಗೆ ಓಗೊಟ್ಟು ಹಿಂದೂ ಸಂಘಟನೆಗಳ ಮುಖಂಡರು ಸಭೆಗೆ ಹಾಜರಾಗಿದ್ದರೂ, ಮುಸ್ಲಿಂ ಸಮುದಾಯದ ಮುಖಂಡರು ಸಭೆಯಿಂದ ದೂರ ಉಳಿದಿದ್ದರು. ಇದರಿಂದ ಕೆರಳಿದ ಹಿಂದೂ ಕಾರ್ಯಕರ್ತರು, “ಒಂದು ಸಮುದಾಯದವರ ಗೈರಿನಲ್ಲಿ ಶಾಂತಿ ಚರ್ಚೆ ಸಾಧ್ಯವಿಲ್ಲ” ಎಂದು ಕಿಡಿ ಕಾರಿ ಸಭೆಯನ್ನು ಬಾಯ್ಕಾಟ್ ಮಾಡಿದರು. ಜಿಲ್ಲಾಡಳಿತದ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಅಂತಿಮವಾಗಿ ಸಭೆಯಿಂದ ಹೊರನಡೆದರು.
ಸದ್ಯ ಪ್ರಕರಣದಲ್ಲಿ 8 ಜನರನ್ನು ಪೊಲೀಸರು ಬಂಧಿಸಿದ್ದರೂ, ಕಲ್ಲು ತೂರಾಟದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಇಂದು ಸಂಜೆಯೊಳಗೆ ಬಂಧಿಸಬೇಕು ಎಂದು ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿವೆ. ಒಂದು ವೇಳೆ ಬಂಧನವಾಗದಿದ್ದರೆ ಫೆಬ್ರವರಿ 22 ರಂದು ಮತ್ತೊಂದು ಬೃಹತ್ ಸಭೆ ನಡೆಸಿ ಮುಂದಿನ ಹೋರಾಟ ರೂಪಿಸುವುದಾಗಿ ಸಂಘಟಕರು ತಿಳಿಸಿದ್ದಾರೆ. ನಗರದಲ್ಲಿ ಈಗಾಗಲೇ 144ನೇ ಸೆಕ್ಷನ್ ಜಾರಿಯಲ್ಲಿದ್ದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ಬಿಗಿ ಬಂದೋಬಸ್ತ್ ಮುಂದುವರಿಸಿದ್ದಾರೆ.
