ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಇಂದು ಇತಿಹಾಸವೇ ಮರುಕಳಿಸಿದಂತೆ ಭಾಸವಾಗುತ್ತಿತ್ತು. 25 ವರ್ಷಗಳ ನಂತರ ಪ್ರತಿಷ್ಠಾಪನೆಯಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಅಶ್ವಾರೂಢ ಮೂರ್ತಿಯ ಆಗಮನದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಕೇಸರಿಮಯವಾಗಿತ್ತು. ಸಕಲ ಸಮಾಜದ ಭಕ್ತರು ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾದರು.

ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯ ಆಗಮನ ಸೋಹಳವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು. ಪೀರನವಾಡಿಯ ಶಿವಛತ್ರಪತಿ ಸೇವಾ ಸ್ಮಾರಕದ ವತಿಯಿಂದ ಸುಮಾರು 25 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಹಳೆಯ ಮೂರ್ತಿಯ ಜಾಗದಲ್ಲಿ ಈಗ ಭವ್ಯವಾದ ನೂತನ ಅಶ್ವಾರೂಢ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಶಿವಭಕ್ತರು ಪಾಲ್ಗೊಂಡು ಜಯಘೋಷ ಹಾಕಿದರು. ಪಟಾಕಿಗಳ ಆರ್ಭಟ, ಡಿಜೆಗಳ ಅಬ್ಬರವಿಲ್ಲದೆ ಸಾಂಪ್ರದಾಯಿಕ ಡೋಲು-ತಾಶೆ ಹಾಗೂ ಧ್ವಜ ಪಥಕಗಳ ನಡುವೆ ಶಿವಮೂರ್ತಿಯನ್ನು ಸ್ವಾಗತಿಸಲಾಯಿತು.
ಮೆರವಣಿಗೆಯ ಉದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರ, ಭಜನಾ ಮಂಡಳಿಗಳ ಗಾಯನ ಮತ್ತು ಸಾಹಸ ಕ್ರೀಡೆಗಳ ಪ್ರದರ್ಶನ ಜನಮನ ಸೆಳೆಯಿತು. ಈ ಕಾರ್ಯಕ್ರಮದ ವಿಶೇಷವೆಂದರೆ ಮರಾಠಾ, ಕುರುಬ ಸಮುದಾಯ ಸೇರಿದಂತೆ ಗ್ರಾಮದ ಎಲ್ಲಾ ಸಮಾಜ ಬಾಂಧವರು ಒಂದಾಗಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು. “ನಮ್ಮ ಪಾಲಿಗೆ ಇದು ಐತಿಹಾಸಿಕ ಕ್ಷಣ, ಸಮಾಜದ ಎಲ್ಲರೂ ಒಗ್ಗಟ್ಟಾಗಿ ಈ ದೈವಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ” ಎಂದು ಸಮಿತಿಯ ಪ್ರಮುಖರು ಈ ಸಂದರ್ಭದಲ್ಲಿ ತಿಳಿಸಿದರು.
ಇಡೀ ಪೀರನವಾಡಿ ಪಂಚಕ್ರೋಶ ವ್ಯಾಪ್ತಿಯು ಶಿವಭಕ್ತರ ಜಯಕಾರದಿಂದ ಮೇಳೈಸುತ್ತಿತ್ತು.
