ಸತ್ತ ಮೇಲೂ ಸಿಗಲಿಲ್ಲವೇ ಶಾಂತಿ? ಹೌದು, ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸ್ಮಶಾನಕ್ಕೆ ದಾರಿ ಇಲ್ಲದ ಕಾರಣ ಮೃತದೇಹವನ್ನೇ ರಸ್ತೆಯಲ್ಲಿಟ್ಟು ಕುಟುಂಬಸ್ಥರು ಕಣ್ಣೀರಿಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ದಶಕಗಳ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಿಂಗದಾಳ ಗ್ರಾಮದಲ್ಲಿ ಮೃತದೇಹಕ್ಕೆ ಅಂತಿಮ ಸಂಸ್ಕಾರ ಮಾಡಲು ಸ್ಮಶಾನಕ್ಕೆ ದಾರಿಯೇ ಇಲ್ಲದ ದಾರುಣ ಘಟನೆ ವರದಿಯಾಗಿದೆ. ಈ ಹಿಂದೆ ರೈತರೊಬ್ಬರು ತಮ್ಮ ಜಮೀನಿನಲ್ಲಿ ದಾರಿ ನೀಡಿದ್ದರು, ಆದರೆ ಸರ್ವೆ ವೇಳೆ ಅದು ಖಾಸಗಿ ಜಮೀನೆಂದು ಸಾಬೀತಾದ ಮೇಲೆ ದಾರಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಸಾಧ್ಯವಾಗದೆ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಡು ರಸ್ತೆಯಲ್ಲೇ ಶವವಿಟ್ಟು ರಾಮದುರ್ಗ-ಸುರೇಬಾನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ದಾರಿ ಮಾಡಿಕೊಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಶ ಕಟ್ಟೆಯೊಡೆದಿತ್ತು. ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. “ನಮಗೆ ಭರವಸೆ ಬೇಡ, ದಾರಿ ಬೇಕು” ಎಂದು ಪಟ್ಟು ಹಿಡಿದ ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೈಡ್ರಾಮಾ ನಡೆದಿದ್ದು, ಅಧಿಕಾರಿಗಳ ಹರಸಾಹಸ ಮುಂದುವರಿದಿದೆ.
