• ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಆರ್. ಅಶೋಕ ಬೆಂಬಲ.
• ಮೂರು ವರ್ಷದಿಂದ ನಡೆಯದ ಸರ್ಕಾರಿ ನೇಮಕಾತಿ.
• ಖಜಾನೆ ಖಾಲಿಯಿದ್ದರೆ ಕೂಡಲೇ ಶ್ವೇತಪತ್ರ ಹೊರಡಿಸಿ.
• ಹಂತ ಹಂತವಾಗಿ ನೇಮಕಾತಿ ಅಂದ್ರೆ ಏನು?

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಆಕ್ರೋಶದ ನಡುವೆಯೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕೆಂಡಾಮಂಡಲವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ನೇಮಕಾತಿ ಮಾಡದ ಕಾಂಗ್ರೆಸ್ ಸರ್ಕಾರ, ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಕಾಂಗ್ರೆಸ್ ಸರ್ಕಾರವನ್ನು ‘ಎಡಬಿಡಂಗಿ ಸರ್ಕಾರ’ ಎಂದು ಟೀಕಿಸಿದರು. “ರಾಜ್ಯ ಸರ್ಕಾರದ ಯೋಗ್ಯತೆಗೆ ಮೂರು ವರ್ಷಗಳಿಂದ ಒಬ್ಬೇ ಒಬ್ಬ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಭ್ಯರ್ಥಿಗಳು ಕೋಚಿಂಗ್ ಪಡೆದು ಕಾಯುತ್ತಿದ್ದಾರೆ, ಆದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದ ಕಾರಣ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಹಣದ ಕೊರತೆ ಇದ್ದರೆ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಲಿ” ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಗಳು ಹಂತ ಹಂತವಾಗಿ ನೇಮಕಾತಿ ಎನ್ನುತ್ತಾರೆ, ಅದರ ಅರ್ಥವೇನು ಎಂದು ಪ್ರಶ್ನಿಸಿದ ಅವರು, “ಉದ್ಯೋಗಾಕಾಂಕ್ಷಿಗಳ ನೋವಿಗೆ ಸ್ಪಂದಿಸುವುದು ರಾಜಕೀಯ ಪ್ರೇರಿತ ಎನ್ನುವ ಡಿ.ಕೆ. ಶಿವಕುಮಾರ್ ಅವರು ಹಿಂದೆ ಪ್ರತಿಭಟನೆಗಳಲ್ಲಿ ಭಾಗವಹಿಸಿರಲಿಲ್ಲವೇ?” ಎಂದು ಕಿಡಿಕಾರಿದರು. ತಾವು ಸಚಿವರಾಗಿದ್ದ ಅವಧಿಯಲ್ಲಿ ಸಾವಿರಾರು ನೇಮಕಾತಿಗಳನ್ನು ಮಾಡಿದ್ದಾಗಿ ನೆನಪಿಸಿದ ಅಶೋಕ, ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
