Dharwad

ಧಾರವಾಡದಲ್ಲಿ ಗೋವು ಸಾಗಾಟ ವಿರೋಧಿ ಪ್ರತಿಭಟನೆ ವೇಳೆ ಹಸು ದಾಳಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಗಂಭೀರ ಗಾಯ

Share

ಕಸಾಯಿಖಾನೆ ಮೇಲೆ ಬಜರಂಗದಳ ದಾಳಿ ವೇಳೆ ಅವಘಡ
ಪೊಲೀಸ್ ಇನ್ಸ್ಪೆಕ್ಟರ ಮೇಲೆ ಜಿಗಿದ ಹಸು ಗಂಭೀರ ಗಾಯ
ಸೋಮವಾರ ತಡ ರಾತ್ರಿ ವೇಳೆ ಘಟನೆ
ಚಿಕಿತ್ಸೆಗಾಗಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲು

ಧಾರವಾಡದಲ್ಲಿ ತಡರಾತ್ರಿ ಹಸುವೊಂದು ರೊಚ್ಚಿಗೆದ್ದು ಪೊಲೀಸ್ ಅಧಿಕಾರಿಯ ಮೇಲೆ ಜಿಗಿದಿರುವ ಆತಂಕಕಾರಿ ಘಟನೆ ನಡೆದಿದೆ. ಕಸಾಯಿಖಾನೆ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಇನ್ಸ್‌ಪೆಕ್ಟರ್ ಸೇರಿದಂತೆ ಕ್ಯಾಮರಾಮನ್ ಒಬ್ಬರು ಗಾಯಗೊಂಡಿದ್ದಾರೆ.
ಧಾರವಾಡದ ಶಿವಾಜಿ ವೃತ್ತದ ಸಮೀಪವಿರುವ ಕಸಾಯಿಖಾನೆಯ ಬಳಿ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಕಸಾಯಿಖಾನೆಗೆ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಹಾಗೂ ದಾಳಿ ನಡೆಸುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಧಾವಿಸಿದ್ದರು. ಪ್ರತಿಭಟನೆಯ ನಡುವೆ ಏಕಾಏಕಿ ರೊಚ್ಚಿಗೆದ್ದ ಹಸುವೊಂದು, ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರ ಮೇಲೆ ಜಿಗಿದಿದೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಇನ್ಸ್‌ಪೆಕ್ಟರ್ ಪ್ರಭು ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಘಟನೆಯ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಮನ್ ಗುರು ಅವರಿಗೂ ಅಲ್ಪಪ್ರಮಾಣದ ಪೆಟ್ಟು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನ ಡಿಸಿಪಿ ಹಾಗೂ ಎಸಿಪಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ.

Tags:

error: Content is protected !!