M K HUBLI

ಡಾ. ಬಾಬು ಜಗಜೀವನರಾಮ್ ಭವನದ ಜಾಗ ಅತಿಕ್ರಮಣ ಮತ್ತು SC/ST ಅನುದಾನ ದುರ್ಬಳಕೆ ಆರೋಪ

Share

ಅನುದಾನ ದುರ್ಬಳಕೆ ಹಾಗೂ ಸರ್ಕಾರಿ ಜಾಗದ ಅತಿಕ್ರಮಣ ಖಂಡಿಸಿ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿಕೊಂಡಿದೆ. ಡಾ. ಬಾಬು ಜಗಜೀವನರಾಂ ಭವನದ ಜಾಗವನ್ನು ಖಾಸಗಿಯವರು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಬೃಹತ್ ಹೋರಾಟ ಕೈಗೊಂಡಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿರುವ ಡಾ. ಬಾಬು ಜಗಜೀವನರಾಂ ಭವನದ ಜಾಗ ಅತಿಕ್ರಮಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಸಮುದಾಯಗಳಿಗೆ ಮೀಸಲಾದ ಅನುದಾನದ ದುರ್ಬಳಕೆ ನಡೆದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಕಳೆದ ಎರಡು ದಿನಗಳಿಂದ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಹೋರಾಟಗಾರರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಆರು ದಿನಗಳ ಕಾಲಾವಕಾಶ ನೀಡಿ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಡಾ. ಬಾಬು ಜಗಜೀವನರಾಂ ಭವನಕ್ಕೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಲಾಗಿದ್ದು, ಇದರಲ್ಲಿ ಕೆಲವು ಖಾಸಗಿ ವ್ಯಕ್ತಿಗಳ ಕೈವಾಡವಿದೆ ಎಂದು ಅವರು ಆರೋಪಿಸಿದರು. ಹಾಗೆಯೇ SC/ST ಸಮುದಾಯಗಳಿಗೆ ದೊರೆಯಬೇಕಾದ ಅನುದಾನವನ್ನು ಉದ್ದೇಶಪೂರ್ವಕವಾಗಿ ಬೇರೆ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೆ ಎಂ.ಕೆ. ಹುಬ್ಬಳ್ಳಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ ಸರಿಯಾದ ತಡೆಗೋಡೆ ಇಲ್ಲದಿರುವುದರಿಂದ ಶಾಲೆಯ ಪಕ್ಕದಲ್ಲಿರುವ ಕೆರೆಯಿಂದ ವಿಷಜಂತುಗಳು ಶಾಲಾ ಆವರಣಕ್ಕೆ ಬರುತ್ತಿದ್ದು, ಇದರಿಂದ ಶಾಲಾ ಮಕ್ಕಳ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಹೋರಾಟಗಾರರು ಈ ಸಂದರ್ಭದಲ್ಲಿ ತಿಳಿಸಿದರು.

Tags:

error: Content is protected !!