ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಇಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಭರ್ಜರಿ ಭವಿಷ್ಯ ನುಡಿಯಲಾಗಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಸಮ್ಮುಖದಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರು ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ. 2028ರ ಸಿಎಂ ಪಟ್ಟದ ಕುರಿತು ಶಾಂತಗೌಡರು ನೀಡಿದ ಆ ಒಂದು ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.


ಬೀಳಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ‘ಜಿ ರಾಮ್ ಜಿ’ ಯೋಜನೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರು ಬಿ.ವೈ ವಿಜಯೇಂದ್ರ ಅವರನ್ನು ಹಾಡಿಹೊಗಳಿದ್ದಾರೆ. “ಸೂರ್ಯ ಮೂಡುವುದು ಎಷ್ಟು ಸತ್ಯವೋ, 2028ರಲ್ಲಿ ವಿಜಯೇಂದ್ರ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ” ಎಂದು ಅವರು ಘೋಷಿಸಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರ ಸಮ್ಮುಖದಲ್ಲೇ ವಿಜಯೇಂದ್ರ ಪರ ಈ ಭವಿಷ್ಯವಾಣಿ ಮೊಳಗಿದ್ದು, ನೆರೆದಿದ್ದ ಕಾರ್ಯಕರ್ತರು ಕೇಕೆ, ಶಿಳ್ಳೆ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.


ಬಿ.ಎಸ್ ಯಡಿಯೂರಪ್ಪ ಅವರ ಆಡಳಿತಾವಧಿಯ ಜನಪರ ಯೋಜನೆಗಳನ್ನು ಸ್ಮರಿಸಿದ ಶಾಂತಗೌಡ ಪಾಟೀಲ್, ಈ ಹಿಂದೆ ಯಡಿಯೂರಪ್ಪ ಅವರು ಇಲ್ಲಿಗೆ ಬಂದು ಹೋದ ಮೇಲೆ ಸಿಎಂ ಆಗಿದ್ದರು, ಈಗ ವಿಜಯೇಂದ್ರ ಅವರು ಬಂದಿದ್ದಾರೆ, ಅವರು ಕೂಡ ಸಿಎಂ ಆಗಲಿದ್ದಾರೆ ಎಂಬುದು ಜನರ ಆಸೆಯಾಗಿದೆ ಎಂದರು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಬಲಿಷ್ಠವಾಗುತ್ತಿದೆ. ರಾಜ್ಯದ ಪ್ರತಿ ಹಳ್ಳಿಯಲ್ಲೂ ಜನ ವಿಜಯೇಂದ್ರ ಅವರ ನೇತೃತ್ವವನ್ನು ಬಯಸುತ್ತಿದ್ದಾರೆ ಎಂದು ಹೇಳುವ ಮೂಲಕ ವಿಜಯೇಂದ್ರ ಅವರ ವರ್ಚಸ್ಸನ್ನು ಜಿಲ್ಲಾಧ್ಯಕ್ಷರು ಎತ್ತಿಹಿಡಿದರು.

