BELAGAVI

ಬೆಳಗಾವಿ ಉತ್ತರದಲ್ಲಿ ಅಭಿವೃದ್ಧಿ ಸಂಚಲನ: ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಶಾಸಕ ಆಸೀಫ್ ಸೇಠ್ ಚಾಲನೆ

Share

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಸಕ ಆಸೀಫ್ ಸೇಠ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ಇತ್ತ ಕಲೈಗಾರ್ ಗಲ್ಲಿಯಲ್ಲಿ ದಶಕಗಳ ಬೇಡಿಕೆಯಾಗಿದ್ದ ಸುಸಜ್ಜಿತ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕರೆ, ಅತ್ತ ವೀರಭದ್ರ ನಗರದ ನಿವಾಸಿಗಳಿಗೆ ಕಾಡುತ್ತಿದ್ದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯುಜಿಡಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹಾಗೂ ಯುವ ನಾಯಕ ಅಮಾನ್ ಸೇಠ್ ಅವರು ಇಂದು ಕಲೈಗಾರ್ ಗಲ್ಲಿಯಲ್ಲಿ ನೂತನ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಭಾಗದ ನಿವಾಸಿಗಳು ದೀರ್ಘಕಾಲದಿಂದ ಸುಸಜ್ಜಿತ ರಸ್ತೆಗಾಗಿ ಬೇಡಿಕೆಯಿಟ್ಟಿದ್ದರು, ಇದೀಗ ಕಾಮಗಾರಿ ಆರಂಭವಾಗಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು, ಕ್ಷೇತ್ರದ ಮೂಲಭೂತ ಸೌಕರ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಶಾಸಕರಿಗೆ ಆತ್ಮೀಯವಾಗಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ಷೇತ್ರದಾದ್ಯಂತ ರಸ್ತೆ ಸಂಪರ್ಕ ಸುಧಾರಿಸಲು ಮತ್ತು ಬಾಳಿಕೆ ಬರುವ ಮೂಲಸೌಕರ್ಯ ಒದಗಿಸಲು ನಾನು ಬದ್ಧನಾಗಿದ್ದೇನೆ ಎಂದರು. ಮಳೆಗಾಲದಲ್ಲಿ ಪದೇ ಪದೇ ಹಾಳಾಗುವ ಡಾಂಬರ್ ರಸ್ತೆಗಳಿಗಿಂತ ಸಿಸಿ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವುದರಿಂದ ಇವುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಮತ್ತು ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ನಿವಾಸಿಗಳಿಗೆ ಭರವಸೆ ನೀಡಿದರು.

ಇನ್ನು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವೀರಭದ್ರ ನಗರದ 3ನೇ ಕ್ರಾಸ್‌ನಲ್ಲಿ ಶಾಸಕ ಆಸಿಫ್ ಸೇಠ್ ಹಾಗೂ ಯುವ ನಾಯಕ ಅಮಾನ್ ಸೇಠ್ ಅವರು ಇಂದು ಅತ್ಯಾಧುನಿಕ ಒಳಚರಂಡಿವ್ಯವಸ್ಥೆಯ ಕಾಮಗಾರಿಗೆ ಚಾಲನೆ ನೀಡಿದರು. ಈ ಭಾಗದಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ಚರಂಡಿ ಸಮಸ್ಯೆಗೆ ವೈಜ್ಞಾನಿಕವಾಗಿ ಮತ್ತು ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದು, ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಶಾಸಕರು ನೀಡುತ್ತಿರುವ ವೇಗವನ್ನು ಶ್ಲಾಘಿಸಿದರು.

ಜನರೊಂದಿಗೆ ಸಂವಾದ ನಡೆಸಿದ ಶಾಸಕ ಆಸೀಫ್ ಸೇಠ್ ಅವರು, “ಕ್ಷೇತ್ರದ ಪ್ರತಿಯೊಂದು ಬಡಾವಣೆಯಲ್ಲೂ ನೈರ್ಮಲ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ” ಎಂದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಗದಿತ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ವಾಸಯೋಗ್ಯ ವಾತಾವರಣ ನಿರ್ಮಿಸಲು ಮುಂದಾದ ಶಾಸಕರಿಗೆ ವೀರಭದ್ರ ನಗರದ ನಿವಾಸಿಗಳು ಹೃತೂರ್ವಕ ಕೃತಜ್ಞತೆ ಸಲ್ಲಿಸಿದರು.

Tags:

error: Content is protected !!