ದಿಲ್ಲಿಯ ಛತ್ರಿ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಎಸ್‍ಜಿಎಫ್‍ಐ ರಾಷ್ಟ್ರೀಯ ಚಾಂಪಿಯನ್‍ಶಿಫ್‍ನಲ್ಲಿ 39 ಕೆಜಿ ಕುಸ್ತಿ ವಿಭಾಗದಲ್ಲಿ ಧಾರವಾಡ ಕ್ರೀಡಾಶಾಲೆಯ ಪ್ರಭಾವತಿ ಲಂಗೂಟಿ ಅವರು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದಿದ್ದು, ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಪ್ರಭಾರಿ ಡಿಸಿ ಭುವನೇಶವರು ಸಾಧನೆಗೈದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದ್ದಾರೆ.

ಪ್ರಭಾವತಿ ಧಾರವಾಡ ಕ್ರೀಡಾ ವಸತಿ ನಿಲಯ ಸೇರಿ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ. ಚಿನ್ನದ ಪದಕ ವಿಜೇತೆಯಾದ ಪ್ರಭಾವತಿ ಲಂಗೂಟಿ ಅವರನ್ನು ಜಿಲ್ಲಾ ಪಂಚಾಯತದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
