ನಗರದ ಮಹತ್ವಾಕಾಂಕ್ಷೆ ಸಿಟಿಸ್ 2.o ಯೋಜನೆ 125 ಕೋಟಿ ರೂ. ಮೊತ್ತದ ಯೋಜನೆ 75 ಕೋಟಿ ರೂ.ಗೆ ಇಳಿಸಿರುವುದನ್ನು ಖಂಡಿಸಿ ಗುರುವಾರ ರಾಜಕುಮಾರ ಟೋಪಣ್ಣವರ, ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ, ನ್ಯಾಯವಾದಿ ನಿತೀನ್ ಬೊಳಬಂದಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಅಭಿವೃದ್ಧಿಗೆ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ ಪರಿಗಣಿಸಲಾದ ಸಿಟಿಸ್ 2.0 ಯೋಜನೆಯಡಿ ಬೆಳಗಾವಿಗೆ ಪ್ರಸ್ತಾಪಿಸಲಾಗಿದ್ದ 135 ಕೋಟಿ ರೂ. ಮೊತ್ತದ ಯೋಜನೆ ಈಗ 75 ಕೋಟಿ ರೂ. ಇಳಿಕೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಎಂದು ದೂರಿದ್ದಾರೆ.
ನಗರ ಮೂಲಸೌಕರ್ಯ ಬಲಪಡಿಸುವುದು, ಹವಾಮಾನ ಸ್ಥೈರ್ಯ ಕ್ರಮಗಳು ಹಾಗೂ ಆಧುನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವ ಉದ್ದೇಶದಿಂದ ಬೆಳಗಾವಿ ನಗರವನ್ನು ಈ ರಾಷ್ಟ್ರೀಯ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಆರಂಭಿಕ ಪ್ರಸ್ತಾವನೆಯಂತೆ 135 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆ ರೂಪಿಸಲಾಗಿತ್ತು. ಆದರೆ, ಯೋಜನಾ ಮೊತ್ತವನ್ನು ಸುಮಾರು 60 ಕೋಟಿಯಷ್ಟು ಕಡಿತಗೊಳಿಸಿರುವ ಮಾಹಿತಿ ಹೊರಬಿದ್ದಿದ್ದು, ಇದರ ಪರಿಣಾಮವಾಗಿ ಹಲವು ಪ್ರಮುಖ ಕಾಮಗಾರಿಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವನ್ನು ಮನವಿಯಲ್ಲಿ ತಿಳಿಸಿದ್ದಾರೆ.
75 ಕೋಟಿ ರೂ. ಯೋಜನೆ ಅನುಷ್ಠಾನ ವಾದರೆ ಪ್ರಮುಖ ಮೂಲಸೌಕರ್ಯ ಯೋಜನೆಗಳ ವ್ಯಾಪ್ತಿಯಲ್ಲಿ ಕುಗ್ಗುತ್ತದೆ.ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ಪರಿಣಾಮಕಾರಿತ್ವದಲ್ಲಿ ಹಿನ್ನಡೆಯಾಗಿ ಹವಾಮಾನ ಸ್ಥೈರ್ಯ ಯೋಜನೆಗಳ ಮಿತಿಗೊಳಿಸುತ್ತದೆ. ಸ್ಥಳೀಯ ಉದ್ಯೋಗಾವಕಾಶಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬಿಳುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರದ ನಾಗರಿಕರು ಮತ್ತು ವಿವಿಧ ಸಂಘಟನೆಗಳು ಈ ವಿಷಯದಲ್ಲಿ ಪಾರದರ್ಶಕತೆ ಕೋರಿದ್ದು, ಯೋಜನಾ ಮೊತ್ತ ಕಡಿತಗೊಳಿಸಿದ ಕಾರಣಗಳನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
135 ಕೋಟಿ ವ್ಯಾಪ್ತಿಯನ್ನು ಮರುಸ್ಥಾಪಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಬೇಕೆಂಬ ಬೇಡಿಕೆಯೂ ಕೇಳಿಬಂದಿದೆ. ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿರುವ ಬೆಳಗಾವಿಗೆ ಸಮರ್ಪಕ ಮೂಲಸೌಕರ್ಯ ಹೂಡಿಕೆ ಅಗತ್ಯವಾಗಿದ್ದು, ನಗರದ ಹಕ್ಕಿನ ಅನುದಾನವನ್ನು ಕಡಿತಗೊಳಿಸುವುದು ಅಭಿವೃದ್ಧಿ ಗತಿಗೆ ಅಡ್ಡಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕುರಿತು ಸಂಬಂಧಿತ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
