ಬೀಗ ಹಾಕಿದ ಮನೆಯನ್ನೇ ಗುರಿಯಾಗಿಸಿಕೊಂಡು ನುಗ್ಗಿದ ಖದೀಮರು, ನಗದು ಹಣದ ಜೊತೆಗೆ ಸಾಕ್ಷಿ ನಾಶಪಡಿಸಲು ಸಿಸಿಟಿವಿ ಡಿವಿಆರ್ ಅನ್ನೇ ಹೊತ್ತೊಯ್ದ ಘಟನೆ ಖಾನಾಪುರ ತಾಲೂಕಿನ ಕಾಲಮಣಿ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತ ಹಾಗೂ ಮುಖ್ಯೋಪಾಧ್ಯಾಯರಾದ ಸುನೀಲ ಚಿಗುಳ್ಕರ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಸದ್ಯ ಪೊಲೀಸ್ ತನಿಖೆ ಚುರುಕುಗೊಂಡಿದೆ.


ಕಾಲಮಣಿ-ಆಮಟೆ ರಸ್ತೆಯಲ್ಲಿರುವ ಸುನೀಲ ಚಿಗುಳ್ಕರ್ ಅವರ ಮನೆ ಕಳೆದ ಕೆಲವು ತಿಂಗಳಿನಿಂದ ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಬೀಗ ಹಾಕಲಾಗಿತ್ತು. ಗ್ರಾಮದ ಶಾಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗ್ರಾಮಸ್ಥರೆಲ್ಲರೂ ಬ್ಯುಸಿಯಾಗಿದ್ದ ಸಂದರ್ಭವನ್ನು ಸಂಚು ರೂಪಿಸಿದ್ದ ಕಳ್ಳರು, ಮುಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದಾರೆ. ಮನೆಯ ಮೂರು ಕೊಠಡಿಗಳ ಬೀಗ ಮುರಿದು ಅಲ್ಮೇರಾದಲ್ಲಿದ್ದ ಸುಮಾರು 20 ಸಾವಿರ ರೂ. ನಗದು ಹಾಗೂ ಮನೆಯ ರಕ್ಷಣೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ವ್ಯವಸ್ಥೆಯ ಡಿವಿಆರ್ ಅನ್ನು ಕಿತ್ತೊಯ್ದಿದ್ದಾರೆ. ತಡರಾತ್ರಿ ಮೊಬೈಲ್ನಲ್ಲಿ ಸಿಸಿಟಿವಿ ಸಂಪರ್ಕ ಕಡಿತಗೊಂಡಿದ್ದನ್ನು ಗಮನಿಸಿದ ಮಾಲೀಕರು ಸೋದರಳಿಯನಿಗೆ ಪರಿಶೀಲಿಸಲು ತಿಳಿಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಹಾಗೂ ಜಾಂಬೋಟ್ಟಿ ಔಟ್ ಪೋಸ್ಟ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಿಂದ ಬಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯ ಸಂಗ್ರಹಿಸಿದ್ದು, ಶ್ವಾನವು ಕಾಲಮಣಿ-ಆಮಟೆ ರಸ್ತೆಯವರೆಗೆ ಹೋಗಿ ಸುಳಿವು ಕಳೆದುಕೊಂಡಿದೆ. ಕಳ್ಳರು ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌವ್ಸ್ ಧರಿಸಿ ಕೃತ್ಯ ಎಸಗಿರುವುದರಿಂದ ವೃತ್ತಿಪರ ಕಳ್ಳರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
