ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ವಾತಾವರಣದಿಂದಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಕೆಲವರು ಮನೋವೈಕಲ್ಯಕ್ಕೊಳಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಮುಂದಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಘಟನೆಗಳನ್ನು ತಡೆಯಲು ಪ್ರತಿಯೊಂದು ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಮಾಲೋಚಕರ (ಕೌನ್ಸಿಲರ್) ವ್ಯವಸ್ಥೆ ಇರಬೇಕು ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಹೇಳಿದರು.


ಶುಕ್ರವಾರ ಸಂಜೆ ಐನಾಪುರದ ಶಾಂತಿಸಾಗರ್ ಆಂಗ್ಲ ಮಾಧ್ಯಮ ವಿದ್ಯಾಪೀಠದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ಸಂಜಯ ನಿಕಂ, ಪಿಎಸ್ಐ ಸುಭಾಷ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಡಿವೈಎಸ್ಪಿ ಮುನ್ನೋಳಿ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾ, “ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಆರಂಭದಲ್ಲಿ ಇಂಗ್ಲಿಷ್ ಭಾಷೆ ಕಲಿಯಲು ಕಷ್ಟವಾಯಿತು. ಆದರೆ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಿದೆ. ಇಂದು ನೀವು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವುದರಿಂದ ನಿಮ್ಮ ಮುಂದೆ ಉತ್ತಮ ಅವಕಾಶಗಳಿವೆ. ಪೋಷಕರು ಮಕ್ಕಳ ಚಲನವಲನಗಳ ಮೇಲೆ ಗಮನಹರಿಸಿ, ಅವರ ಮನೋಭಾವವನ್ನು ಅರ್ಥೈಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು. ಶಾಲೆಗಳಲ್ಲಿ ಸಮಾಲೋಚನಾ ವ್ಯವಸ್ಥೆಯಿದ್ದರೆ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.


ಸಂಸ್ಥೆಯ ಉಪಾಧ್ಯಕ್ಷ ಪಾಯಪ್ಪಾ ಕೂಡುವಕ್ಕಲಗಿ ಮಾತನಾಡಿ, “ಸಂಸ್ಥೆಯ ದಿವಂಗತ ಅಧ್ಯಕ್ಷ ರವೀಂದ್ರ ಗಾಣಿಗೇರ್ ಸೇರಿದಂತೆ ಎಲ್ಲಾ ನಿರ್ದೇಶಕರ ಸಹಕಾರದಿಂದ ಈ ಶಿಕ್ಷಣ ಸಂಸ್ಥೆಯು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಪ್ರಸ್ತುತ 36 ತರಗತಿ ಕೋಣೆಗಳಲ್ಲಿ ತಜ್ಞ ಶಿಕ್ಷಕರ ಮಾರ್ಗದರ್ಶನದಲ್ಲಿ ಸುಮಾರು 1300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಓದಿದ 60 ಮಂದಿ ಇಂಜಿನಿಯರ್ಗಳು, 25 ಮಂದಿ ವೈದ್ಯರು ಹಾಗೂ ಅನೇಕರು ಪೊಲೀಸ್, ಸೈನ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ,” ಎಂದು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಅರುಣ್ ಗಾಣಿಗೇರ್ ಮಾತನಾಡಿ, “ಶಾಂತಿಸಾಗರ್ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ಕುಟುಂಬಗಳಿಗೆ ಆಶಾಕಿರಣವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು,” ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು: ಶೈಶವಾವಸ್ಥೆಯಲ್ಲೇ ಪೋಷಕರನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದು, ನೀಟ್ (NEET) ಪರೀಕ್ಷೆಯಲ್ಲಿ ಸಾಧನೆ ಮಾಡಿ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿನೋದ ನಂದಗಾವೆ ಇವರನ್ನು ಗೌರವಿಸಲಾಯಿತು.ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ ಸಂಜನಾ ಪಾಟೀಲ್ (98.88%), ಪ್ರಣವ ಹಿರೇಮಠ (97.25%) ಮತ್ತು ಶ್ರೀನಿಧಿ ಎರಂಡೋಲೆ (97.28%) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನುಪ್ ಶೆಟ್ಟಿ, ನಿರ್ದೇಶಕ ಮಂಡಳಿಯ ಸದಸ್ಯರು, ಮುಖ್ಯಾಧ್ಯಾಪಕ ಮೋಹನ್ ಮೋಳೆಕರ್ ಹಾಗೂ ಇತರರು ಉಪಸ್ಥಿತರಿದ್ದರು.
