ರಾಜ್ಯ ಸರ್ಕಾರ ವಿವಿಧ ಕಾಮಗಾರಿಗಳಡಿ ಬಾಕಿ ಉಳಿಸಿಕೊಂಡ ಗುತ್ತಿಗೆದಾರರ 37 ಸಾವಿರ ಕೋಟಿ ರೂಪಾಯಿಗಳನ್ನು ಶೀಘ್ರದಲ್ಲೇ ಪಾವತಿಸಿದ್ದರೇ, ಜಾರಿಯಲ್ಲಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಫ್ರೀಡಂ ಪಾರ್ಕಿನಲ್ಲಿ ಸಹಕುಟುಂಬ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದ ವತಿಯಿಂದ ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ಧ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಗುತ್ತಿಗೆದಾರರ 3458 ಕೋಟಿ ರೂಪಾಯಿ ಬಿಲ್ ಬಾಕಿಯಿದೆ. ಡಿಸಿಎಂ ಮತ್ತು ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಗುತ್ತಿಗೆದಾರರ ಅನುಕೂಲದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಯಾವುದೇ ಒಂದು ಅಧಿಕೃತ ಸಭೆಯನ್ನು ಕರೆದು ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ಕೇವಲ ಆಶ್ವಾಸನೆಗಳು ಮಾತ್ರ ಬಂದ ಹಿನ್ನೆಲೆ ಹೋರಾಟಕ್ಕೆ ಮುಂದಾಗುತ್ತಿದ್ದೇವೆ. ನಾವು ನಮ್ಮ ಆಸ್ತಿಪಾಸ್ತಿಗಳನ್ನು ಅಡವಿಟ್ಟಿದ್ದೇವೆ. ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬಜೆಟ್ ಮಂಡಿಸಲಿದ್ದು, ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಆಗ್ರಹಿಸಿದರು.
ಇನ್ನು ರಾಜ್ಯದಲ್ಲಿ 37 ಸಾವಿರ ಕೋಟಿ ರೂಪಾಯಿ ವಿವಿಧ ಕಾಮಗಾರಿಯ ಮೂರು ವರ್ಷದ ಅನುದಾನ ಬಾಕಿಯಿದೆ. ಇದನ್ನ ಬಿಡುಗಡೆ ಮಾಡುವಲ್ಲಿ ಹಿಂದಿನ ಸರ್ಕಾರಕ್ಕಿಂತಲೂ ಈಗೀನ ಸರ್ಕಾರದಲ್ಲಿಯೂ ಕಮಿಷನ್ ಇದೆ. ಮುಖ್ಯಮಂತ್ರಿಗಳು ಹಳೆಯ ಸರ್ಕಾರವೆಂದು ಹೇಳದೇ ಪ್ರಸ್ತುತ ಸರ್ಕಾರವು ಹಿಂದಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಜಾರಿಯಲ್ಲಿರುವ ಕಾಮಗಾರಿಗಳನ್ನು ನಿಲ್ಲಿಸಿ 20-35 ಸಾವಿರ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಲಿದ್ದೇವೆ. ಇದಕ್ಕೂ ಸರ್ಕಾರ ಜಗ್ಗಲಿಲ್ಲವೆಂದರೇ ಏಪ್ರೀಲ್ ನಂತರ ಅನಿರ್ದಿಷ್ಟಾವಧಿ ಸಹಕುಟುಂಬ ಸಮೇತ ಫ್ರೀಡಂ ಪಾರ್ಕ್’ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಮಾಧ್ಯಮಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ.ಕೆ.ಮುಲ್ಲಾ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
