ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಈ ಬಾರಿಯ ಬಜೆಟ್’ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ 200 ಕೋಟಿ ಅನುದಾನ ಬಿಡುಗಡೆ ಮಾಡದಿದ್ದರೇ ಉಗ್ರ ಹೋರಾಟ ನಡೆಸಲಾಗುವುದೆಂದು ಲಿಂಗತ್ವ ಮತ್ತು ಲೈಂಗಿಕ ಹಕ್ಕು ಚಳುವಳಿಯ ರಾಜ್ಯ ಸಮಿತಿಯ ಸದಸ್ಯೆ ಅಯಿನಾ ಶೇಖ್ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಹಕ್ಕು ಚಳುವಳಿಯ ರಾಜ್ಯ ಸಮಿತಿಯ ಸದಸ್ಯೆ ಅಯಿನಾ ಶೇಖ್ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಯಾವುದೇ ವಾಗ್ದಾನಗಳನ್ನು ಪೂರೈಸಿಲ್ಲ ಎಂದು ಕಿಡಿಕಾರಿದರು. “ಅಭಿವೃದ್ಧಿಗಾಗಿ 200 ಕೋಟಿ ರೂ. ಅನುದಾನ ಮತ್ತು ಪ್ರತಿ ವರ್ಷ 2 ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಇಂದು ನಮ್ಮನ್ನು ಬೀದಿಗೆ ತಂದಿಟ್ಟಿದೆ. ನಮ್ಮ ಅವಶ್ಯಕತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ” ಎಂದು ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ಸಂವಿಧಾನದಂತೆ ನಮಗೂ ಸ್ವಾಭಿಮಾನಿ ಜೀವನ ನಡೆಸುವ ಹಕ್ಕಿದೆ ಎಂದು ಒತ್ತಿ ಹೇಳಿದರು. ಶೇ. 1 ರಷ್ಟು ಮೀಸಲಾತಿ ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಅರ್ಹರಿಗೆ ಉದ್ಯೋಗ ಸಿಕ್ಕಿಲ್ಲ. ಕೂಡಲೇ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ವಸತಿ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
