ಒಂದು ಕಾಲದಲ್ಲಿ ಚಂಡೀಗಡದ ಮಾದರಿಯಲ್ಲಿ ನಿರ್ಮಾಣವಾಗಲಿದೆ ಎಂದು ಅದ್ದೂರಿಯಾಗಿ ಬಿಂಬಿತವಾಗಿದ್ದ ಬಾಗಲಕೋಟೆ ನವನಗರ, ಇಂದು ಕೊಳಚೆ ನಗರವಾಗಿ ಮಾರ್ಪಡುತ್ತಿದೆ. ಶಾಸಕರ ಅನುಪಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ನಗರದ ಸ್ವಚ್ಛತೆಯನ್ನು ಸಂಪೂರ್ಣವಾಗಿ ಮರೆತಂತಿದ್ದಾರೆ. ಎಲ್ಲೆಂದರಲ್ಲಿ ಹರಡಿರುವ ಕಸದ ರಾಶಿ, ತುಂಬಿ ಹರಿಯುತ್ತಿರುವ ಚರಂಡಿಗಳು ನವನಗರದ ಅಂದಗೆಡಿಸುತ್ತಿವೆ.

ಬಾಗಲಕೋಟೆ ನವನಗರದಲ್ಲಿ ಈಗ ಯಾರು ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕ್ರೀಡಾಂಗಣದ ಅಕ್ಕಪಕ್ಕದಲ್ಲಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ತಿಪ್ಪೆಗುಂಡಿಯಂತೆ ಬೆಳೆದಿದೆ. ಪ್ರತಿನಿತ್ಯ ಕಸ ವಿಲೇವಾರಿ ಮಾಡಬೇಕಾದ ವಾಹನಗಳು ಸರಿಯಾದ ಸಮಯಕ್ಕೆ ಬರದ ಕಾರಣ, ಅನಿವಾರ್ಯವಾಗಿ ಜನರು ರಸ್ತೆಗಳ ಮೇಲೆಯೇ ಕಸ ಹಾಕುತ್ತಿದ್ದಾರೆ. ಬಿಟಿಡಿಎ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸುಸಜ್ಜಿತವಾಗಿರಬೇಕಾದ ರಸ್ತೆಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ.
“ನವನಗರ ಹೋಗಿ ಕೊಳಚೆ ನಗರವಾಗುತ್ತಿದೆ” ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ. ಶಾಸಕರ ಅನುಪಸ್ಥಿತಿಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂಬುದು ಸಾರ್ವಜನಿಕರ ಆರೋಪ. ಸ್ವಚ್ಛತಾ ಕಾರ್ಯಗಳು ನಡೆಯದ ಕಾರಣ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡಿ, ನವನಗರದ ಘನತೆಯನ್ನು ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
