ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ವೇಗವಾಗಿ ಬಂದ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ ಕಾರ್ ಚಾಲಕ ಮುಂದೆ ಹೋಗಿ ಕ್ಯಾಂಟರ್ ಗಾಡಿಗೆ ಗುದ್ದಿದ್ದು, ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಹಲಗಾ ಗ್ರಾಮದ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಹಲಗಾ -ಬಸ್ತವಾಡ ಗ್ರಾಮದ ಗವಂಡಿ ಕೆಲಸಗಾರ ದೇವೇಂದ್ರ ಚೌಗುಲೆ ಅವರು ತಮ್ಮ ಬೈಕ್ (KA22EH6342) ಮೂಲಕ ಬೆಳಗಾವಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸುವರ್ಣ ವಿಧಾನಸೌಧದ ಗೇಟ್ ಮುಂಭಾಗದ ರಸ್ತೆಯ ಪಕ್ಕದಲ್ಲಿ ಸಾಗುತ್ತಿದ್ದಾಗ, ಹಿಂದಿನಿಂದ ಬಂದ ಮಹಾರಾಷ್ಟ್ರ ಪಾಸಿಂಗ್ ಕಾರ್ (MH11CW9495) ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದೇವೇಂದ್ರ ಚೌಗುಲೆ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರೇಬಾಗೇವಾಡಿ ಪೊಲೀಸರು ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತ ಬೈಕ್‌ಗೆ ಡಿಕ್ಕಿ ಹೊಡೆದ ಕಾರ್ ಚಾಲಕ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಗಾಂಧಿನಗರದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ಒಂದಕ್ಕೆ ಕಾರ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಸಮಯದಲ್ಲಿ ನಡೆದ ಈ ಸರಣಿ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
