BELAGAVI

ಬೆಳಗಾವಿಯಲ್ಲಿ ಬುಡಾ ಬಿಗ್ ಆಪರೇಷನ್: ಶಿಂದೊಳ್ಳಿಯ 11 ಎಕರೆ ಅಕ್ರಮ ಲೇಔಟ್ ಮೇಲೆ ಬುಲ್ಡೋಜರ್ ಘರ್ಜನೆ!

Share

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಲೇಔಟ್‌ಗಳ ವಿರುದ್ಧ ಸಮರ ಸಾರಿದೆ. ನಗರದ ಹೊರವಲಯದ ಶಿಂದೊಳ್ಳಿ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ನಿರ್ಮಾಣವಾಗಿದ್ದ ಬರೋಬ್ಬರಿ 11 ಎಕರೆ ಪ್ರದೇಶದ ಅಕ್ರಮ ಲೇಔಟ್ ಅನ್ನು ಬುಡಾ ಅಧಿಕಾರಿಗಳು ಇಂದು ನೆಲಸಮ ಮಾಡಿದ್ದಾರೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದ ಶಿಂದೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಬೃಹತ್ ಲೇಔಟ್ ಮೇಲೆ ದಾಳಿ ನಡೆಸಿ ನೆಲಸಮಗೊಳಿಸಿದೆ. ಶಿಂದೊಳ್ಳಿಯ ಸರ್ವೆ ನಂಬರ್ 131/1, 2, 3, 4, 5 ಮತ್ತು 6 ರಲ್ಲಿ ಸುಮಾರು 11 ಎಕರೆ ಪ್ರದೇಶದಲ್ಲಿ ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ ಈ ಲೇಔಟ್ ನಿರ್ಮಿಸಲಾಗಿತ್ತು. ಪ್ರಾಧಿಕಾರದ ನಿಯಮಗಳನ್ನು ಗಾಳಿಗೊತ್ತಿ ರೂಪಿಸಲಾಗಿದ್ದ ರಸ್ತೆಗಳು, ಚರಂಡಿಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ವಿನ್ಯಾಸವನ್ನು ಬುಡಾ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಸಾರ್ವಜನಿಕರು ಇಂತಹ ಅನಧಿಕೃತ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಿ ವಂಚನೆಗೆ ಒಳಗಾಗಬಾರದು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬುಡಾ ಆಯುಕ್ತರಾದ ಶಕೀಲ್ ಅಹಮದ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಾಲ್ಗೊಂಡಿತ್ತು. ಸ್ಥಳದಲ್ಲಿ ಟಿಪಿಎಂ ಬಿ.ವಿ ಹಿರೇಮಠ್, ಎಇಇ ಮಂಜುಶ್ರೀ, ಟಿಪಿ ಶಿವಕುಮಾರ್, ಜೆಇ ಪ್ರಸನ್ನ, ಬಾಳಿಗಡ್ಡಿ, ಸರ್ವೇಯರ್ ವಿದ್ಯಾ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆಯೊಂದಿಗೆ ಉಪಸ್ಥಿತರಿದ್ದರು. ಅಲ್ಲದೆ ನಿಲಜಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ್ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮುಂಬರುವ ದಿನಗಳಲ್ಲಿ ಬೆಳಗಾವಿ ಸುತ್ತಮುತ್ತಲಿನ ಯಾವುದೇ ಅಕ್ರಮ ಲೇಔಟ್‌ಗಳನ್ನು ಸಹಿಸುವುದಿಲ್ಲ ಮತ್ತು ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

Tags:

error: Content is protected !!