Khanapur

ಖಾನಾಪುರದಲ್ಲಿ ಅತಿಕ್ರಮಣಕ್ಕೆ ಬ್ರೇಕ್: ಮುಲಾಜಿಲ್ಲದೆ ರಸ್ತೆ ಅಗಲೀಕರಣಕ್ಕೆ ಮುಂದಾದ ಅಧಿಕಾರಿಗಳು

Share

ಖಾನಾಪುರ ಪಟ್ಟಣದ ಶಿವಸ್ಮಾರಕ ಚೌಕದಲ್ಲಿ ಇಂದು ಬೆಳ್ಳಂಬೆಳಗ್ಗೆ ಜೆಸಿಬಿಗಳು ಗರ್ಜಿಸಿವೆ. ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಮಣಿಯದೆ ಆರಂಭಿಸಿದ್ದಾರೆ.

ಖಾನಾಪುರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಕ್ಕಪಕ್ಕದ ಜಾಗವನ್ನು ಅತಿಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದಾರೆ. ಈ ಅತಿಕ್ರಮಣದಿಂದಾಗಿ ನೂತನ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಸಮಸ್ಯೆಯ ವಿರುದ್ಧ ಪಟ್ಟಣದ ಇಬ್ಬರು ಪತ್ರಕರ್ತರು ಹಾಗೂ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಈ ಹೋರಾಟದ ಫಲವಾಗಿ ಸರ್ವೇ ಕಾರ್ಯ ನಡೆದು, ಮಾರ್ಕಿಂಗ್ ಆದ ಬೆನ್ನಲ್ಲೇ ಈಗ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.

ಅತಿಕ್ರಮಣ ತೆರವುಗೊಳಿಸದಂತೆ ಪ್ರಭಾವಿ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಒತ್ತಡ ಬಂದರೂ ಸಹ, ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಶಿವಸ್ಮಾರಕ ಚೌಕದಿಂದ ಆರಂಭವಾಗಿರುವ ಈ ಕಾರ್ಯಾಚರಣೆಗೆ ಖಾನಾಪುರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ದಿಟ್ಟ ಕ್ರಮಕ್ಕೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ರಸ್ತೆ ವಿಸ್ತರಣೆ ಕಾರ್ಯ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Tags:

error: Content is protected !!